ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಕೊಂಕಣ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ಜಲಾನಯನ ಪ್ರದೇಶದ ಕೊಯ್ನಾ, ನವಜಾದಲ್ಲಿ ಮಳೆ ಹೆಚ್ಚಾಗಿದ್ದು ಮಹಾಬಳೇಶ್ವರದಲ್ಲಿ 8.7 ಸೆಂ.ಮೀ ಮಳೆ ದಾಖಲಾಗಿದೆ.
105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಕೊಯ್ನಾ ಅಣೆಕಟ್ಟೆಯಲ್ಲಿ 85.44 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ಹಾಗೂ ಉಪನದಿಗಳ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿಯ ಮಹಾರಾಷ್ಟ್ರದ ಆಣೆಕಟ್ಟೆಗಳು ಬಹುತೇಕ ಭರ್ತಿಯಾಗಿದ್ದು, ಯಾವಾಗ ಬೇಕಾದರೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡುವ ಸಾಧ್ಯತೆಗಳು ಇರುವುದರಿಂದ ಜಿಲ್ಲಾಡಳಿತ ನದಿ ತೀರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧ್ಗಂಗಾ, ವೇದಗಂಗಾ ನದಿಯ 6 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಸಾರ್ವಜನಿಕರು ಸೇತುವೆ ಹಾಗೂ ನದಿ ಹತ್ತಿರ ಸುಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುಡಚಿ ಪೊಲೀಸ್ ಠಾಣೆ ಸಿಬ್ಬಂದಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.ಇನ್ನು ಸೇತುವೆ ಜಲಾವೃತಗೊಂಡ ಮಾಹಿತಿ ದೊರಕದ ಪ್ರಯಾಣಿಕರು ಮರುಳಿ ಪರ್ಯಾಯ ಮಾರ್ಗದ ಮೂಲಕ ಸಂಚಾರ ಮಾಡಬೇಕಾಗಿದೆ.