ಬೆಂಗಳೂರು: ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ದೇಶಕ್ಕೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ನಾಡಿನ ಹೋರಾಟಗಾರರ ತ್ಯಾಗ, ಬಿಲಿದಾನ ಸ್ಮರಣೀಯ ಎಂದು ಖ್ಯಾತ ವಾಗ್ಮಿ, ಅಂಕಣಕಾರ ಆದರ್ಶ ಗೋಖಲೆ ಹೇಳಿದರು.ಉತ್ತೀಷ್ಠ ಭಾರತ ದಶಮಾನೋತ್ಸವ ಮತ್ತು 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಅದುವೇ ರಾಷ್ಟ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಡಿನ ಪ್ರತಿಯೊಂದು ಮನೆ ಮತ್ತು ಮನಗಳಲ್ಲಿ ಕನ್ನಡದ ದೀಪ ಪ್ರಜ್ವಲಿಸಲಿ. ಆಧುನಿಕತೆಯಡೆಗೆ ಸಾಗುವ ಭರದಲ್ಲಿ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಮರೆಯದಿರೋಣ. ಕನ್ನಡ ಭಾಷೆ ಬೆಳೆಯಲು ಮತ್ತು ಉಳಿಯಲು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ನಮ್ಮ ಸಾಹಿತ್ಯಗಳು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿದ್ದವು ಎಂದು ತಿಳಿಸಿದರು.
ಕಳೆದ ಒಂದು ದಶಕದಲ್ಲಿ ಉತ್ತಿಷ್ಠ ಭಾರತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದೆ. ದಿನಕ್ಕೊಂದು ಕಗ್ಗ, ಹೊದಿಕೆ ವಿತರಣಾ ಅಭಿಯಾನ, ನಮ್ಮ ಸೈನಿಕ ನಮ್ಮ ಹೆಮ್ಮೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ, ಶ್ರೀ ಸ್ವಾನಂದಾಶ್ರಮದಲ್ಲಿ ಶಾಲಾ ಕಿಟ್‌ಗಳನ್ನು ಪ್ರತ್ಯೇಕಿಸುವ, ಸಿದ್ಧಪಡಿಸುವ ಕಾರ್ಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲಾಯಿತು.ವಲಸೆ ಕಾರ್ಮಿಕರ ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಉಚಿತ ಕಾರ್ಯಾಗಾರ, ಸಾರ್ವಜನಿಕ ಭಾಷಣ ಕಲೆ ತರಬೇತಿ ಮತ್ತು ಕಾರ್ಯಾಗಾರ, ಬೀಜದ ಉಂಡೆ ತಯಾರಿಸುವ ಕಾರ್ಯಾಗಾರ, ಕಾರ್ಗಿಲ್ ವಿಜಯ ದಿವಸ ಮತ್ತು ನಿರಂತರ ಎಂಬ ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಲ್ಲಿ ಮಾಡಲಾಯಿತು ಎಂದರು.