Freedom TV

ತಾಳಿ ಕಟ್ಟುವ ವೇಳೆ ಮೊದಲ ಪತ್ನಿ ಎಂಟ್ರಿ! ಮಧುಮಗನ ಪೀಕಲಾಟ;ಆಮೇಲ್ ಆಗಿದ್ದೇನು ?

ತುಮಕೂರು : ಕುಣಿಗಲ್ ತಾಲೂಕಿನ ಎಸ್.ಎಲ್.ಎನ್ ಕನ್ವೇಷನ್ ಹಾಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ತಾಳಿ ಕಟ್ಟುವ ಶುಭ ಮುಹೂರ್ತದಲ್ಲೇ ಅತ್ಯಂತ ಸಿನಿಮೀಯ ಮಾದರಿಯಲ್ಲಿ ನಿಂತು ಹೋಗಿದೆ . ಮದುಮಗ ಹರೀಶ್ ಪ್ರಸಾದ್ ಮಂಡ್ಯ ಮೂಲದ ಯುವತಿಯೊಂದಿಗೆ ಹಸೆಮಣೆ ಏರಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ, ಆತನ ಮೊದಲ ಪತ್ನಿ ಲೇಪಾಕ್ಷಿ ಮಂಟಪಕ್ಕೆ ಎಂಟ್ರಿ ಕೊಡುವ ಮೂಲಕ ದೊಡ್ಡ ಹೈಡ್ರಾಮಾವೇ ನಡೆದಿದೆ. ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಲು ಹರೀಶ್ ಮುಂದಾಗಿದ್ದ ಎಂಬ ಆಘಾತಕಾರಿ ಸತ್ಯ ಈ ವೇಳೆ ಬಯಲಾಗಿದೆ.

ಬೆಂಗಳೂರು ಮೂಲದ ಹರೀಶ್ ಪ್ರಸಾದ್ ಹಾಗೂ ಮಂಡ್ಯದ ಯುವತಿ ಕುಟುಂಬದವರು ಸಂಭ್ರಮದಿಂದ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದರು. ಆದರೆ ಗಂಡನ ಎರಡನೇ ಮದುವೆಯ ಸುಳಿವು ಸಿಗುತ್ತಿದ್ದಂತೆಯೇ ಮೊದಲ ಪತ್ನಿ ಲೇಪಾಕ್ಷಿ ಅವರು ವಕೀಲರು, ಪೊಲೀಸರು ಮತ್ತು ತಮ್ಮ ಸಂಬಂಧಿಕರೊಂದಿಗೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದಾರೆ. ಮೊದಲ ಪತ್ನಿಯ ಹಠಾತ್ ಭೇಟಿಯಿಂದ ಮದುಮಗ ಗಾಬರಿಯಾಗಿದ್ದು , ಮದುವೆಗೆ ಬಂದಿದ್ದ ಅತಿಥಿಗಳು ಕೂಡ ತಬ್ಬಿಬ್ಬಾಗಿದ್ದಾರೆ.

ಈ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ಎರಡು ತಂಡಗಳ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಪೊಲೀಸರು ಸ್ಥಳದಲ್ಲೇ ವರನಿಗೆ ಕಾನೂನು ಪಾಠ ಮಾಡಿದ್ದಾರೆ. ಮದುಮಗನ ವಂಚನೆಯಿಂದ ನೊಂದ ಕನ್ಯೆಯ ಕಡೆಯವರು ತೀವ್ರ ಬೇಸರ ವ್ಯಕ್ತಪಡಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಸದ್ಯ ಪೊಲೀಸರು ಎರಡನೇ ಮದುವೆಗೆ ಸಿದ್ಧನಾಗಿದ್ದ ಹರೀಶ್ ಪ್ರಸಾದ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಸುಂದರವಾಗಿದ್ದ ಮದುವೆ ಮನೆಯು ಕೆಲವೇ ಕ್ಷಣಗಳಲ್ಲಿ ವಿವಾದಕ್ಕೆ ನಾಂದಿ ಹಾಡಿದೆ.

Comments (0)

Your email address will not be published. Required fields are marked *

Back to top button