ವಿಶೇಷ

ಮೇವಿನ ಹೊರೆಯಲ್ಲೇ ಕಂದನ ಭಾರ; ತಾಯಿಯ ಅಪಾರ ಪ್ರೀತಿಗೆ ವೀಕ್ಷಕರು ಫಿದಾ!

ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಯಾವುದೇ ಗಡಿಗಳಿಲ್ಲ ಎಂಬುದಕ್ಕೆ ಈ ವಿಡಿಯೋ ಒಂದು ಜ್ವಲಂತ ಸಾಕ್ಷಿಯಾಗಿದೆ. ಹಳ್ಳಿಗಾಡಿನ ಬದುಕು ಎಷ್ಟು ಕಠಿಣವಾಗಿದ್ದರೂ, ತನ್ನ ಕರ್ತವ್ಯ ಮತ್ತು ಮಗುವಿನ ಮೇಲಿನ ಮಮತೆಯನ್ನು ಸಮತೋಲನಗೊಳಿಸುವ ತಾಯಿಯ ಈ ಚಿತ್ರಣ ನೆಟ್ಟಿಗರ ಮನಸ್ಸನ್ನು ಕಲುಕಿದೆ.

‘ರೋಶಿ’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಮಹಿಳೆಯೊಬ್ಬಳು ದನಕರುಗಳಿಗಾಗಿ ಮೇವಿನ ಹೊರೆಯನ್ನು ಹೊತ್ತಿದ್ದು, ಅದರಲ್ಲೇ ತನ್ನ ಪುಟ್ಟ ಮಗುವನ್ನೂ ಸುರಕ್ಷಿತವಾಗಿ ಕಟ್ಟಿ ತಲೆಯ ಮೇಲೆ ಹೊತ್ತು ಸಾಗುತ್ತಿರುವುದು ದೃಶ್ಯದಲ್ಲಿದೆ. ಅತ್ತ ಮೇವಿನ ಹೊರೆ ಇಳಿಸುವಂತಿಲ್ಲ, ಇತ್ತ ಮಗುವನ್ನು ಬಿಟ್ಟು ಕೆಲಸ ಮಾಡುವಂತಿಲ್ಲ ಎಂಬ ಅನಿವಾರ್ಯತೆಯಲ್ಲಿ ತಾಯಿ ಕಂಡುಕೊಂಡ ಈ ಮಾರ್ಗ ಅವಳ ಜವಾಬ್ದಾರಿ ಮತ್ತು ಪ್ರೀತಿ ಎರಡನ್ನೂ ಏಕಕಾಲಕ್ಕೆ ಎತ್ತಿ ತೋರಿಸುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. “ನನ್ನ ಬಾಲ್ಯವೂ ಹೀಗೆಯೇ ಇತ್ತು, ನನ್ನ ತಾಯಿ ನನ್ನನ್ನು ಹೀಗೆಯೇ ಹೊತ್ತು ಸಾಗುತ್ತಿದ್ದರು” ಎಂದು ಅನೇಕರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಳ್ಳಿಯ ಮಕ್ಕಳಿಗಷ್ಟೇ ಇಂತಹ ಕಠಿಣ ಸನ್ನಿವೇಶಗಳ ಅರಿವಿರುತ್ತದೆ ಮತ್ತು ಇಂತಹ ದೃಶ್ಯಗಳು ತಾಯಿಯ ಪ್ರೀತಿ ಬೆಲೆಕಟ್ಟಲಾಗದ್ದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

Comments (0)

Your email address will not be published. Required fields are marked *

Back to top button