ಕುಂಭಮೇಳದ ಸುಂದರಿ ಈಗ ಪೊಲೀಸ್ ಠಾಣೆಯಲ್ಲಿ!

ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ, ತಮ್ಮ ಕಣ್ಣುಗಳಿಂದಲೇ ಇಡೀ ದೇಶದ ಗಮನ ಸೆಳೆದಿದ್ದ ಮಿಂಚಿನ ಕಣ್ಣಿನ ಹುಡುಗಿ ಮೋನಿ ಭೋಂಸ್ಲೆ ಈಗ ಪ್ರೀತಿಗಾಗಿ ಕೇರಳದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಮಹಾರಾಷ್ಟ್ರದ ಫರ್ಮಾನ್ ಖಾನ್ ಎಂಬುವವರನ್ನು ಮೋನಾಲಿಸಾ ಪ್ರೀತಿಸುತ್ತಿದ್ದು, ಇದಕ್ಕೆ ಕುಟುಂಬಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ತನ್ನ ತಂದೆ ಬಲವಂತವಾಗಿ ಬೇರೆಯವರ ಜೊತೆ ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೋನಿ, ತನಗೆ ಜೀವಭಯವಿರುವುದರಿಂದ ರಕ್ಷಣೆ ನೀಡುವಂತೆ ತಿರುವನಂತಪುರಂನ ತಂಬನೂರು ಪೊಲೀಸ್ ಠಾಣೆಯಲ್ಲಿ ಆಶ್ರಯ ಕೋರಿದ್ದಾರೆ.
ಶೂಟಿಂಗ್ಗಾಗಿ ಕೇರಳಕ್ಕೆ ಬಂದಿದ್ದ ಮೋನಿ, ಕೆಲಸ ಮುಗಿಯುತ್ತಿದ್ದಂತೆಯೇ ಪ್ರಿಯಕರನ ಜೊತೆಗೂಡಿ ಪೊಲೀಸರ ಮೊರೆ ಹೋದರು. ಪೊಲೀಸರು ಆಕೆಯ ತಂದೆ ಜೈ ಸಿಂಗ್ ಭೋಂಸ್ಲೆ ಅವರನ್ನು ಠಾಣೆಗೆ ಕರೆಸಿ ಸಂಧಾನಕ್ಕೆ ಯತ್ನಿಸಿದರೂ, ಮೋನಿ ಮಾತ್ರ ಪ್ರಿಯಕರ ಫರ್ಮಾನ್ ಜೊತೆ ಹೋಗಲು ಪಟ್ಟು ಹಿಡಿದರು. ಮೋನಿ ಈಗ 18 ವರ್ಷ ತುಂಬಿದ ವಯಸ್ಕರಾಗಿರುವುದರಿಂದ, ಕಾನೂನುಬದ್ಧವಾಗಿ ಅವರಿಗೆ ತಮಗೆ ಇಷ್ಟ ಬಂದವರ ಜೊತೆ ಬದುಕುವ ಹಕ್ಕಿದೆ ಎಂದು ಪೊಲೀಸರು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಮೋನಿ ತನ್ನ ಪ್ರೀತಿಯ ಫರ್ಮಾನ್ ಕೈ ಹಿಡಿದು ಪೊಲೀಸ್ ಠಾಣೆಯಿಂದ ಹೊರನಡೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮೋನಿ ಅವರ ಜೀವನವೇ ಬದಲಾಗಿತ್ತು. ‘ದಿ ಡೈರಿ ಆಫ್ ಮಣಿಪುರ್’ ಎಂಬ ಬಾಲಿವುಡ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಅವರು, ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಕೇರಳದ ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಅವರು ಸುದ್ದಿಯಾಗಿದ್ದರು. ಸದ್ಯ ಅವರ ಈ ಪ್ರೇಮ ವಿವಾಹದ ನಿರ್ಧಾರವು ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕುಂಭಮೇಳದ ಸುಂದರಿಯ ಮುಂದಿನ ಪಯಣದ ಬಗ್ಗೆ ಕುತೂಹಲ ಮೂಡಿಸಿದೆ.




