ಮಂಡ್ಯ : ಶುಕ್ರವಾರದಿಂದ ಮೂರು ದಿನಗಳ ಕಾಲ ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರತಿದೆ.
ರಾಷ್ಟ್ರ ಧ್ವಜ, ನಾಡ ಧ್ವಜ ಹಾಗೂ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆ ಮುಖ್ಯದ್ವಾರದ ಮುಂಭಾಗ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ. ಸಚಿವ ಚಲುವರಾಯಸ್ವಾಮಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದು, ಕ.ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ ನಾಡ ಧ್ವಜಾರೋಹಣ ಮಾಡಿದರು. ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ ಪರಿಷತ್ತು ಧ್ವಜ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣದ ವೇಳೆ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ್, ಸಿಇಓ ಶೇಕ್ ತನ್ವೀರ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಉಪಸ್ಥಿತರಿದ್ದರು.