ದೇಶ/ವಿದೇಶಸುದ್ದಿ

ನೇಪಾಳದಲ್ಲಿ ಭೀಕರ ಬಸ್ ದುರಂತ; ತ್ರಿಶೂಲಿ ನದಿಗೆ ಉರುಳಿದ ಬಸ್

ನೇಪಾಳ: ಧಾಡಿಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸುಮಾರು 300 ಮೀಟರ್ ಆಳದ ಪ್ರಪಾತಕ್ಕೆ ಉರುಳಿ ತ್ರಿಶೂಲಿ ನದಿಯ ದಡಕ್ಕೆ ಬಿದ್ದಿದೆ. ಈ ಭೀಕರ ದುರಂತದಲ್ಲಿ 26 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದೆ.

ಅಪಘಾತವು ಬೆಳಗಿನ ಜಾವ 1.30ರ ಸುಮಾರಿಗೆ ಸಂಭವಿಸಿರುವುದರಿಂದ ಕತ್ತಲೆಯಲ್ಲಿ ರಕ್ಷಣಾ ಕಾರ್ಯ ನಡೆಸುವುದು ಅಧಿಕಾರಿಗಳಿಗೆ ಮತ್ತು ಸ್ಥಳೀಯರಿಗೆ ದೊಡ್ಡ ಸವಾಲಾಗಿತ್ತು. ಪೃಥ್ವಿ ಹೆದ್ದಾರಿಯ ಬೇನಿಘಾಟ್ ರೋರಾಂಗ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಾಯಗೊಂಡವರಲ್ಲಿ ಕೆಲವು ವಿದೇಶಿ ಪ್ರಜೆಗಳೂ ಇದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಧಾವಿಸಿದ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ನಿವಾಸಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆಯ ಕಳಪೆ ಸ್ಥಿತಿ, ಅತಿ ವೇಗ ಅಥವಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸಮಗ್ರ ತನಿಖೆ ಆರಂಭಿಸಿದ್ದಾರೆ. ಪರ್ವತ ಪ್ರದೇಶದ ಕಡಿದಾದ ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳ ಕೊರತೆಯು ಇಂತಹ ಸಾವು-ನೋವುಗಳಿಗೆ ದಾರಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Comments (0)

Your email address will not be published. Required fields are marked *

Back to top button