ಮೈಸೂರು: ಇಲ್ಲಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದ ಬಾಗಿಲನ್ನು 11 ವರ್ಷಗಳ ನಂತರ ತೆರೆಯಲಾಗಿದೆ.11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿ ಮಾರಮ್ಮನ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿ ದೇವಸ್ಥಾನದ ಬಾಗಿಲು ತೆರೆಯಲಾಯಿತು.ಗ್ರಾಮದಲ್ಲಿ 11 ವರ್ಷಗಳ ನಂತರ ಸಂತಸ ಮನೆ ಮಾಡಿದೆ. ಎಲ್ಲಾ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯದ ಬಾಗಿಲನ್ನು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ.