ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸರ್ಕಾರ ಭಾರಿ ಹೊಡೆತ ಕೊಟ್ಟಿದೆ. ತೆಲುಗು ಚಿತ್ರರಂಗ ಬಾಲಿವುಡ್ ನಂತರ ಭಾರತದ ಅತ್ಯಂತ ದೊಡ್ಡ ಚಿತ್ರರಂಗ. ಬಾಕ್ಸ್ ಆಫೀಸ್​ ಕಲೆಕ್ಷನ್​ ಲೆಕ್ಕಹಾಕಿ ನೋಡಿದರೆ ಇಡೀ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡುವ ಚಿತ್ರರಂಗ ಟಾಲಿವುಡ್. ಆದರೆ ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಇದು ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು, ಸ್ಟಾರ್ ನಟರನ್ನು ಚಿಂತೆಗೆ ದೂಡಿದೆ.

ತೆಲುಗು ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳು ಕಡಿಮೆ ಇವೆ. ಆದರೆ ಯಾವುದೇ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವ ಸಮಯದಲ್ಲಿ ನಿರ್ಮಾಪಕರು, ಸರ್ಕಾರದ ಬಳಿ ಮನವಿ ಮಾಡಿಕೊಂಡು ಟಿಕೆಟ್ ಬೆಲೆ ಹೆಚ್ಚಳ ಹಾಗೂ ಹೆಚ್ಚುವರಿ ಶೋ ಹಾಕಿಕೊಳ್ಳಲು ಅನುಮತಿ ಪಡೆದುಕೊಳ್ಳುತ್ತಾರೆ. ಕಳೆದ ಕೆಲ ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ ‘ಪುಷ್ಪ 2’ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ಆದ ಅಪಘಾತದ ಬಳಿಕ ತೆಲಂಗಾಣ ಸರ್ಕಾರ, ತೆಲುಗು ಚಿತ್ರರಂಗದ ವಿರುದ್ಧ ನಿಲುವು ತಳೆದಿದೆ.

ನಿನ್ನೆಯಷ್ಟೆ ಸಂಧ್ಯಾ ಚಿತ್ರಮಂದಿರದಲ್ಲಿ ಜೀವ ಕಳೆದುಕೊಂಡ ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ವೆಂಕಟ ರೆಡ್ಡಿ ಅವರಿಗೆ 25 ಲಕ್ಷ ಹಣ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪುಷ್ಪ 2’ ಸಿನಿಮಾವನ್ನು, ಅಲ್ಲು ಅರ್ಜುನ್ ಅನ್ನು ಟೀಕೆ ಮಾಡಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿಯೂ ಈ ಬಗ್ಗೆ ಮಾತನಾಡಿರುವ ಸಚಿವ ವೆಂಕಟ ರೆಡ್ಡಿ, ಚಿತ್ರರಂಗಕ್ಕೆ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ನಿಲ್ಲಿಸುತ್ತಿರುವದಾಗಿ ಘೋಷಣೆ ಮಾಡಿದ್ದಾರೆ.

ತೆಲಂಗಾಣ ಸರ್ಕಾರದ ಈ ನಿರ್ಣಯ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಪೆಟ್ಟು ನೀಡಲಿದೆ. ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳು ಇಲ್ಲದಿದ್ದರೆ ತೆಲುಗು ಸಿನಿಮಾಗಳು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ತೆಲಂಗಾಣ ಸರ್ಕಾರದ ಈ ನಿರ್ಧಾರದಿಂದಾಗಿ ಬಿಗ್ ಬಜೆಟ್ ಸಿನಿಮಾಗಳು ಚಿಂತೆಗೆ ದೂಡಲ್ಪಟ್ಟಿವೆ. ಇದೀಗ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸಂಕ್ರಾಂತಿಗೆ ಸಹ ಕೆಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿದ್ದು, ಅವುಗಳಿಗೂ ಸಹ ಸಮಸ್ಯೆ ಆಗಲಿದೆ.

Leave a Reply

Your email address will not be published. Required fields are marked *

Verified by MonsterInsights