ದೇಶ/ವಿದೇಶ

ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಈಗ ₹2.5 ಕೋಟಿ ಹಗರಣದಲ್ಲಿ ಅರೆಸ್ಟ್!

ಮಧ್ಯಪ್ರದೇಶ: ಗ್ವಾಲಿಯರ್‌ನಲ್ಲಿ ಭಾರಿ ಸಂಚಲನ ಮೂಡಿಸಿರುವ ₹2.5 ಕೋಟಿ ಪ್ರವಾಹ ಪರಿಹಾರ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ ಅಮಿತಾ ಸಿಂಗ್ ತೋಮರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಮಿತಾ ಸಿಂಗ್ ಅವರು ಈ ಹಿಂದೆ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೋನ್ ಬನೇಗಾ ಕರೋಡ್‌ಪತಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಬರೋಬ್ಬರಿ ₹50 ಲಕ್ಷ ಗೆಲ್ಲುವ ಮೂಲಕ ದೇಶದಾದ್ಯಂತ ದೊಡ್ಡ ಮಟ್ಟದ ಪ್ರಚಾರ ಪಡೆದಿದ್ದರು. ಆದರೆ ಅಂದು ಜ್ಞಾನದಿಂದ ಹಣ ಗೆದ್ದಿದ್ದ ಈ ಮಹಿಳೆ, ಇಂದು ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಹಣ ಲೂಟಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ.

ಈ ಹಗರಣವು 2021ರಲ್ಲಿ ಬರೋಡಾ ಉಪವಿಭಾಗದಲ್ಲಿ ನಡೆದಿದ್ದು, ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ವಿತರಿಸಬೇಕಿದ್ದ ಪರಿಹಾರ ನಿಧಿಯನ್ನು ವ್ಯವಸ್ಥಿತವಾಗಿ ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಬರೋಡಾ ಎಸ್‌ಡಿಒಪಿ ಅವನೀತ್ ಶರ್ಮಾ ನೇತೃತ್ವದ ತನಿಖಾ ತಂಡವು ಈ ಬೃಹತ್ ಜಾಲವನ್ನು ಭೇದಿಸಿದ್ದು, ಈಗಾಗಲೇ ತಹಶೀಲ್ದಾರ್ ಮತ್ತು ಕಂದಾಯ ಇಲಾಖೆಯ ಸುಮಾರು 22 ಅಧಿಕಾರಿಗಳನ್ನು ಬಂಧಿಸಿದೆ. ಸದ್ಯ ಅಮಿತಾ ತೋಮರ್ ಅವರನ್ನ ಗ್ವಾಲಿಯರ್‌ನಲ್ಲಿ ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಅವರು ಶಿವಪುರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಈ ಹಗರಣದಲ್ಲಿ ಒಟ್ಟು 110 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಲಾಗಿದೆ. ಅಮಿತಾ ತೋಮರ್ ಅವರು ಈ ಹಿಂದೆ ಬಂಧನದಿಂದ ತಪ್ಪಿಸಿಕೊಳ್ಳಲು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾ ಮಾಡಿದೆ. ಬಡವರ ಹೊಟ್ಟೆ ಮೇಲೆ ಹೊಡೆದು ನಕಲಿ ಖಾತೆಗಳ ಮೂಲಕ ಹಣ ಲೂಟಿ ಮಾಡಿದ ಈ ಅಧಿಕಾರಿಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಮುಂದಿನ ಕಾನೂನು ಕ್ರಮಗಳು ಬಿಗಿಗೊಂಡಿವೆ.

Comments (0)

Your email address will not be published. Required fields are marked *

Back to top button