2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿದೆ. ತೀಸ್ರೀ ಬಾರ್ ಮೋದಿ ಸರ್ಕಾರ್..!? ಅಬ್ ಕೀ ಬಾರ್ ಚಾರ್ ಸೌ ಪಾರ್..! ಈ ಘೋಷ ವಾಕ್ಯದೊಂದಿಗೆ ಎದುರಾಳಿ ಕಾಂಗ್ರೆಸ್ ಪಕ್ಷದ ಎದೆ ನಡುಗಿಸಿ ಮತ್ತೊಂದು ಸುತ್ತಿಗೆ ಅಧಿಕಾರ ಹಿಡಿಯೋದಿಕ್ಕೆ ಮೋದಿ ಟೀಂ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರತಿ ಲೋಕಸಭೆ ಚುನಾವಣೆಗೂ ಒಂದೊಂದು ಘೋಷ ವಾಕ್ಯ ಮೊಳಗಿಸುವಂತೆ 2024ರ ಲೋಕಸಭೆ ಚುನಾವಣೆಗೆ ಹೊಸ ಘೋಷ ವಾಕ್ಯವನ್ನ ಪ್ರಕಟಿಸಿದೆ..
ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್ (ಮೂರನೇ ಬಾರಿ ಮೋದಿ ಸರ್ಕಾರ, ಈ ಬಾರಿ ಬಿಜೆಪಿ ದಾಟಲಿದೆ 400 ಸ್ಥಾನ) ಎಂಬ ಹೊಸ ಘೋಷ ವಾಕ್ಯವನ್ನು ಬಳಸಲು ನಿರ್ಧರಿಸಿದೆ. ಈ ಮೂಲಕ 2024ರ ಲೋಕಾ ಚುನಾವಣೆಗೆ ರಣಕಹಳೆ ಮೊಳಗಿಸಿದೆ.

ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ ಬಳಿಕ ಈ ಘೋಷಣೆಗಳನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಉಪಸ್ಥಿತರಿದ್ದರು.
ಶೀಘ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಹಂತಗಳಲ್ಲಿ ಬಿಜೆಪಿ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲು ನಿರ್ಧರಿಸಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ , ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಭೇಟಿ ಕ್ಲಸ್ಟರ್ಗಳ ಮಟ್ಟದಲ್ಲಿ ಆರಂಭಸಲಾಗುತ್ತದೆ. ಸಭೆಯಲ್ಲಿ 150ಕ್ಕೂ ಹೆಚ್ಚು ಮುಖಂಡರು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ನೆಹರು ದಾಖಲೆ ಮುರಿಯಲಿದ್ದಾರಾ ಮೋದಿ?
ಹೌದು..ಇಂತಹದ್ದೊಂದು ಚರ್ಚೆ ಕೂಡ ಇದೀಗ ರಾಜಕೀಯ ವಲಯದಲ್ಲಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸವನ್ನು ಗಮನಿಸಿದರೆ ಈವರೆಗೆ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರು ಮಾತ್ರ ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆದರೆ, ನೆಹರೂ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಮೋದಿ ಹ್ಯಾಟ್ರಿಕ್ ಸಾಧಿಸುವತ್ತ ಹೆಜ್ಜೆ ಇಡುತ್ತಿರುವ ಕಾರಣ ಬಿಜೆಪಿ ಕೂಡಾ ಭಾರಿ ಹುಮ್ಮಸ್ಸಿನಲ್ಲಿದೆ.