ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂತೇರೊ ಮದುವೆ ನಿಶ್ಚಯ ಆಗಿದ್ದು,ಇದೆ ತಿಂಗಳ 11 ರಂದು, ಈ ಜೋಡಿ ಸಪ್ತಪದಿ ತುಳಿಯಲು ವೇದಿಕೆ ಸಿದ್ಧವಾಗಿದೆ. ಬೆಂಗಳೂರಿನಲ್ಲೇ 2 ದಿನಗಳ ಕಾಲ ಮದುವೆ ಸಮಾರಂಭ ನಡೆಯಲಿದ್ದು, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಇಬ್ಬರು ಮಾಹಿತಿ ನೀಡಿದ್ದಾರೆ. ಮಾಧ್ಯಮದವರನ್ನು ಸಹ ಮದುವೆಗೆ ಆಹ್ವಾನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಮ್ಮಿಬ್ಬರ ನಡುವೆ ಹೇಗೆ ಪ್ರೇಮ ಶುರು ಆಯಿತು ಅನ್ನೋದನ್ನು ಕೂಡ ತರುಣ್ ಹಾಗೂ ಸೋನಲ್ ಹಂಚಿಕೊಂಡಿದ್ದಾರೆ. “ನಮ್ಮಿಬ್ಬರ ಲವ್ ಸ್ಟೋರಿ ‘ರಾಬರ್ಟ್’ ಚಿತ್ರದ ಸಮಯದಲ್ಲಿ ಶುರುವಾಗಲಿಲ್ಲ. ಆ ಸಿನಿಮಾ ಸಮಯದಲ್ಲಿ ಇಬ್ಬರಿಗೂ ಕೇವಲ ಪರಿಚಯವಾಯಿತು ಅಷ್ಟೆ. ಬಳಿಕ 4 ವರ್ಷ ನಮ್ಮ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಮೆಸೇಜ್ ಮಾಡ್ತಿದ್ವಿ ಅಷ್ಟೇ “ಎಂದರು.
ರಾಬರ್ಟ್ ಸೆಟ್‌ನಲ್ಲಿ ದರ್ಶನ್ ಸರ್ ನಮಗೆ ಸುಮ್ಮನೆ ತಮಾಷೆ ಮಾಡುತ್ತಿದ್ದರು. ಸೋನಲ್‌ಗೆ ತುಂಬಾ ಚೆನ್ನಾಗಿ ಫ್ರೇಮ್ ಇಡ್ತೀಯಾ? ನಮಗೆ ಮಾತ್ರ ಯಾಕೆ ಇಡಲ್ಲ ಎಂದು ದರ್ಶನ್ ಸರ್ ಕಿಚಾಯಿಸುತ್ತಿದ್ದರು. ಇಲ್ಲ ಇಲ್ಲ ಅಂದ್ರು, ನೀನು ಲೈನ್ ಹೊಡಿತ್ತಿದ್ದೀಯಾ ಅಂತ ಕಾಲೆಳೆಯೋಕೆ ಶುರು ಮಾಡಿದ್ದರು. ನಮ್ ಅಮ್ಮ ಸೆಟ್‌ಗೆ ಬಂದಾಗ ನನ್ನ ಅಮ್ಮನ ಬಳಿ ,ಹುಡುಗಿ ಓಕೆನಾ, ಒಪ್ಪಿಗೆ ಆದಳ ,ಹುಡುಗಿ ಚೆನ್ನಾಗಿದ್ದಾಳ ಅಂತ ದರ್ಶನ್ ಸರ್ ಕೇಳುತ್ತಿದ್ದರು. ಅದಕ್ಕೆ ನನ್ನಮ್ಮ ನೀವು ಓಕೆ ಅಂದರೆ ನನಗು ಓಕೆ ಎಂದು ಅಮ್ಮ ಹೇಳುತ್ತಿದ್ದರು ಅಷ್ಟೆ. ಅದೆಲ್ಲ ಬರೀ ತಮಾಷೆ ಆಗಿಯೇ ಇತ್ತು”
“ರಾಬರ್ಟ್ ಸಿನಿಮಾ ಶೂಟಿಂಗ್ ಬಳಿಕ ನಾವು ಎಲ್ಲಾ ಮರೆತುಬಿಟ್ಟಿದ್ದೆವು. ಬಳಿಕ ನಾವಿಬ್ಬರು ಡೇಟ್ ಮಾಡುತ್ತಿದ್ದೀವಿ ಎಂದು ಇಂಡಸ್ಟ್ರಿಯಲ್ಲಿ ಟಾಕ್ ಶುರುವಾಯಿತು. ಸೋನಲ್ ಅವರನ್ನು ಈ ಬಗ್ಗೆ ಕೇಳುತ್ತಿದ್ದರಂತೆ, ಅದನ್ನು ಹೇಳಲು ಅವರು ನನಗೆ ಫೋನ್ ಮಾಡಿದ್ದರು. 4 ವರ್ಷಗಳ ಬಳಿಕ ‘ಕಾಟೇರ’ ಸೆಟ್‌ನಲ್ಲಿ ಆಪ್ತರು ಇದೇ ವಿಚಾರ ಹೇಳಲು ಆರಂಭಿಸಿದರು. ಚಿಕ್ಕಣ್ಣ, ಸುಧಾಕರ್ ನಿಮ್ಮಬ್ಬರ ಜೋಡಿ ಚೆನ್ನಾಗಿರುತ್ತದೆ ಎನ್ನಲು ಆರಂಭಿಸಿದರು” ಎಂದು ತರುಣ್ ನೆನಪಿಸಿಕೊಂಡಿದ್ದಾರೆ.
“ಸೋನಲ್ ಫೋನ್ ಮಾಡಿ ಈತರ ಸುದ್ದಿ ಯಾಕೆ ಹರಡಿತು ಗೊತ್ತಿಲ್ಲ. ನಾನು ಎಲ್ಲೂ ಹೇಳಿಲ್ಲ. ನೀವು ನನ್ನನ್ನು ತಪ್ಪು ತಿಳಿಯಬೇಡಿ ಎಂದರು. ಆಗ ಮಾತನಾಡುವಾಗ ಯಾಕೆ ಪದೇ ಪದೆ ಈ ವಿಚಾರ ಬರ್ತಿದೆ ಎನಿಸಲು ಆರಂಭಿಸಿತು. 2023ರ ಜನವರಿ, ಫೆಬ್ರವರಿಯಲ್ಲಿ ಇಬ್ಬರೂ ಹೆಚ್ಚು ಮಾತನಾಡಲು ಆರಂಭಿಸಿದೆವು. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು”
ಒಂದು ಹಂತದಲ್ಲಿ ಇಬ್ಬರೂ ಒಂದಾಗುವ ಬಗ್ಗೆ ಯೋಚಿಸಿದೆವು. ‘ಕಾಟೇರ’ ಸಿನಿಮಾ ರಿಲೀಸ್‌ವರೆಗೂ ಸಮಯ ಕೊಡಿ ಎಂದು ಕೇಳಿದ್ದೆ. ಆ ಸಿನಿಮಾ ಮೇಲೆ ನನ್ನ ಜೀವನದ ಡಿಸೈನ್ ಮಾಡಿಕೊಳ್ಳುತ್ತೇನೆ ಎಂದೆ. ‘ಕಾಟೇರ’ ಸಕ್ಸಸ್ ಬಳಿಕವೇ ಮದುವೆ ಮಾತುಕತೆ ಬಂತು. ಅವರ ಮನೆ ಹೋಗಿ ಮಾತನಾಡಿದೆ. ಎರಡೂ ಮನೆಯಲ್ಲಿ ಒಪ್ಪಿದರು. ದರ್ಶನ್ ಸರ್ ಸಹ ಎರಡೂ ಮನೆಯಲ್ಲಿ ಮಾತನಾಡಿದರು” “ಕಾಟೇರ’ ಸಿನಿಮಾ ರಿಲೀಸ್ ಆಗಿ 2 ತಿಂಗಳ ಬಳಿಕ ಮಾತುಕತೆ ಆಯಿತು. ಇದೀಗ ಮದುವೆ ಹಂತಕ್ಕೆ ಬಂದು ನಿಂತಿದೆ” ಎಂದು ತರುಣ್ ಸುಧೀರ್ ವಿವರಿಸಿದ್ದಾರೆ. ದರ್ಶನ್ ಸರ್‌ನ ಭೇಟಿ ಆಗಿ ಮದುವೆ ಬಗ್ಗೆ ಹೇಳಿದೆ. ಅವರು ಮದುವೆ ಸಿದ್ಧತೆ ಬಗ್ಗೆ ಕೇಳಿದರು. ಯಾವುದೇ ಕಾರಣಕ್ಕೂ ದಿನಾಂಕ ಬದಲಿಸಬೇಡಿ ಎಂದರು. ವಿಜಯಲಕ್ಷ್ಮಿ ಅತ್ತಿಗೆಗೆ ಮದುವೆಗೆ ಆಮಂತ್ರಣ ನೀಡಿದ್ದೇವೆ ಎಂದು ತರುಣ್- ಸೋನಲ್ ಹೇಳಿದ್ದಾರೆ.