ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ಜೋರಾಗಿದೆ. ಡಿಕೆ ಶಿವಕುಮಾರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.. ಧಾರವಾಡದ ಶಾಸಕ ವಿನಯ್ ಕುಲಕರ್ಣಿ ಮತ್ತು ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಭೇಟಿ ಮಾಡಲು ಡಿಕೆಶಿ ದಿಢೀರ್ ಹೊರಟ್ಟಿದ್ದಾರೆ.
ಇಬ್ಬರು ಕಾಂಗ್ರೆಸ್ ಶಾಸಕರು ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಪಪ್ಪಿ ಜೈಲು ಸೇರಿದ್ದಾರೆ. ಪ್ರಸ್ತುತ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಬಣ ಹೈಕಮಾಂಡ್ ಮುಂದೆ ತಮ್ಮ ನಾಯಕನಿಗೆ ಸಿಎಂ ಕುರ್ಚಿ ನೀಡುವಂತೆ ಪಟ್ಟು ಹಿಡಿದಿರುವಂತೆ ಕಾಣ್ತಿದೆ. ಮತ್ತೊಂದು ಕಡೆ ನಾನು ಯಾವುದೇ ಬಣದ ನಾಯಕನಲ್ಲ.
140 ಶಾಸಕರ ಅಧ್ಯಕ್ಷನಿದ್ದೇನೆ. ಗುಂಪುಗಾರಿಕೆ ಮಾಡುವನು ನಾನಲ್ಲ ಎಂದು ಶಿವಕುಮಾರ್ ನೇರವಾಗಿ ಕಾಂಗ್ರೆಸ್ನ ಎಲ್ಲಾ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಹೈಕಮಾಂಡ್, ಸಿಎಂ ಸ್ಥಾನ ನೀಡಲು ಒಪ್ಪಿದರೆ ಶಾಸಕರ ಬೆಂಬಲ ಬೇಕು ಅನ್ನೋದು ಡಿಕೆಶಿಗೆ ಗೊತ್ತಿದೆ. ಇದೇ ಕಾರಣಕ್ಕೆ ನಾನು 140 ಶಾಸಕರ ಅಧ್ಯಕ್ಷ ಎನ್ನುತ್ತಲೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿರೋದು ಕುತೂಹಲ ಮೂಡಿಸಿದೆ.
ಈಗಾಗಲೇ ಡಿಕೆಶಿ ಬಣದ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಬಣದ ಶಾಸಕರು ಬೆಂಗಳೂರಿನಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ.
ಈ ಹಿಂದೆಯೇ ನವೆಂಬರ್ ಕ್ರಾಂತಿ ಆಗಲಿದೆ ಎಂಬ ಸುದ್ದಿ ಬಂದಿತ್ತು. ಆದರೆ ಈಗ ನವೆಂಬರ್ ಕ್ರಾಂತಿ ಆರಂಭವಾಗಿದ್ದು ನಂಬರ್ ಕ್ರಾಂತಿ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಅಧಿಕಾರ ಹಂಚಿಕೆ ವಿಚಾರ ಬಂದರೆ ಎರಡು ಬಣದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಈ ವಿಚಾರದ ಬಗ್ಗೆ ಮಾತನಾಡಲು ಡಿಕೆಶಿ ಇಬ್ಬರು ಶಾಸಕರ ಜೊತೆ ಮಾತನಾಡಲು ತೆರಳಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ದೆಹಲಿಯ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಶರತ್ ಬಚ್ಚೆಗೌಡ ಆಗಮಿಸಿದ್ದಾರೆ. ಹೊಸಕೋಟೆ ಶಾಸಕರಾಗಿರುವ ಶರತ್ ಬಚ್ಚೆಗೌಡ, ಡಿಕೆ ಶಿವಕುಮಾರ್ ಅವರ ಅತ್ಯಪ್ತ. ಅದರಂತೆ ಡಿಕೆ ಪರವಾಗಿ ಪ್ರತಿಯೊಬ್ಬ ಶಾಸಕರು ಪ್ರತ್ಯೆಕವಾಗಿ ಖರ್ಗೆಯನ್ನು ಭೇಟಿ ಆಗುತ್ತಿದ್ದಾರೆ.


