ಬೆಂಗಳೂರು: ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ ಒದಗಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ..
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18ರಿಂದ 52ರ ವಯೋಮಾನದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಸೌಲಭ್ಯ ನೀಡಬೇಕು ಎಂದು ಎಲ್ಲ ಉದ್ಯೋಗದಾತರಿಗೂ ಸೂಚಿಸಿದೆ.
ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ರಜೆಯಂತೆ ವಾರ್ಷಿಕ 12 ದಿನಗಳ ರಜೆಯನ್ನು ಒದಗಿಸಬೇಕು. ಆದರೆ ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಬಳಸಿಕೊಳ್ಳಬೇಕು. ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸುವಂತಿಲ್ಲ ಎಂದು ತಿಳಿಸಿದೆ.
ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಸೌಲಭ್ಯ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸರಕಾರದ ಅಧೀನ ಕಾರ್ಯದರ್ಶಿ ಸುಮಾ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.


