ಬೆಂಗಳೂರು: ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಇಂದು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ನಾಯಕರ ಜೊತೆ ಪ್ರತ್ಯೇಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಇದೀಗ ಪ್ರತಿ ಟನ್ ಕಬ್ಬಿಗೆ 3300 ರೂಪಾಯಿ ನೀಡಲು ಒಪ್ಪಿಗೆ ನೀಡಿದ್ದಾರೆ.
ರೈತರು ಆಗ್ರಹಿಸಿದ್ದ 3,500 ಬದಲಿಗೆ 3,300 ದರ ನಿಗದಿಗೆ ಒಪ್ಪಿಗೆ ಸೂಚಿಸಲಾಗಿದೆ. ಇದರಲ್ಲಿ ಸರ್ಕಾರದಿಂದ ₹50 ಮತ್ತು ಸಕ್ಕರೆ ಕಾರ್ಖಾನೆಗಳಿಂದ ₹50 ಹೆಚ್ಚುವರಿ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ 3,500 ಬೆಂಬಲ ಬೆಲೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದರು. ಮಂಡ್ಯ, ಮೈಸೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಸ್ತೆ ತಡೆ, ಧರಣಿ, ಟೈಯರ್ ಸುಡುವುದು, ಪೊಲೀಸರೊಂದಿಗೆ ಘರ್ಷಣೆಗಳು ನಡೆದಿದ್ದವು.
ಬೆಳಗಾವಿಯಲ್ಲಿ ಹೋರಾಟ ಹಿಂಸಾಚಾರಕ್ಕೆ ತಿರುಗಿ, ಸಾರ್ವಜನಿಕ ಆಸ್ತಿಗೆ ಹಾನಿ, ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿದ್ದವು. ಇದರಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿತ್ತು. ರೈತರ ಆಕ್ರೋಶಕ್ಕೆ ಕೇಂದ್ರ ಸರ್ಕಾರದ ಕಡಿಮೆ ಎಫ್‌ಆರ್‌ಪಿ 3,150, ಬಾಕಿ ಪಾವತಿಗಳು, ಸಕ್ಕರೆ ರಫ್ತು ನಿರ್ಬಂಧಗಳು ಮುಖ್ಯ ಕಾರಣಗಳಾಗಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ತುರ್ತು ಸಭೆಗಳನ್ನು ಕರೆದಿತ್ತು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಮೊದಲು ಕಾರ್ಖಾನೆ ಮಾಲೀಕರು 3,200 ನೀಡಲು ಒಪ್ಪಿಕೊಂಡಿದ್ದರು. ಆದರೆ, ರೈತರು ಇದನ್ನು ತಿರಸ್ಕರಿಸಿ ಹೋರಾಟ ಮುಂದುವರಿಸಿದ್ದರು. ಎರಡನೇ ಸುತ್ತಿನ ಸಭೆಯಲ್ಲಿ ಸಿಎಂ ಅವರು 3,300ಕ್ಕೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ಇದರಲ್ಲಿ ಕೇಂದ್ರದ ಎಫ್‌ಆರ್‌ಪಿ 3,150ಕ್ಕೆ ಸರ್ಕಾರ ₹50 ಮತ್ತು ಕಾರ್ಖಾನೆಗಳು ₹50 ಸೇರಿಸಿ ಒಟ್ಟು 3,300 ಮಾಡಲಾಗುವುದು. ಸರ್ಕಾರದ ಈ ನಿರ್ಧಾರ ರಾಜ್ಯದ ಕೃಷಿ ಮತ್ತು ಸಕ್ಕರೆ ಉದ್ಯಮಕ್ಕೆ ಮಹತ್ವದ್ದಾಗಿದೆ. ಹೋರಾಟ ಹಿಂಸಾಚಾರಕ್ಕೆ ತಿರುಗದಂತೆ ಮನವೊಲಿಕೆಯಲ್ಲಿ ಸರ್ಕಾರ ಯಶಸ್ವಿಯಾಗಿದೆ. ಈ ತೀರ್ಮಾನದಿಂದ ರಾಜ್ಯದಲ್ಲಿ ಶಾಂತಿ ಮರಳುವ ನಿರೀಕ್ಷೆಯಿದೆ.


