
ರಾಜ್ಯ ಸರ್ಕಾರ ಸರ್ಕಾರಿ ನೌಕರರು ಖಾದಿ ಬಟ್ಟೆ ಧರಿಸುವುದು ಕಡ್ಡಾಯ ಎಂದು ಘೋಷಿಸಿದೆ. ಈ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡಿದ್ದಾರೆ. ಹೊಸ ನಿಯಮ ಪ್ರತಿ ತಿಂಗಳ ಮೊದಲ ಶನಿವಾರ ಜಾರಿಗೆ ಬರುವುದಾಗಿ ತಿಳಿಸಲಾಗಿದೆ. ಈ ಯೋಜನೆಯು 2026 ಏಪ್ರಿಲ್ 24ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿದೆ.
ಪ್ರತಿ ತಿಂಗಳ ಮೊದಲ ಶನಿವಾರ, ಸರ್ಕಾರದ ಎಲ್ಲಾ ಅಧಿಕಾರಿ ಮತ್ತು ನೌಕರರು ಖಾದಿ ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯ.ಖಾದಿ ಬಟ್ಟೆಗಳನ್ನು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಿಂದ ಖರೀದಿಸಬೇಕು.ಖಾದಿ ಗ್ರಾಮೋದ್ಯೋಗ ಮಂಡಳಿ ನೀಡುತ್ತಿರುವ ನೈರ್ಮಿತಿಕ ರಿಯಾಯಿತಿಯ ಜೊತೆಗೆ, ನೌಕರರಿಗೆ ಶೇ.5 ಹೆಚ್ಚುವರಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದಿದ್ದಾರೆ.
ಪುರುಷ ನೌಕರರು ಖಾದಿ ಶರ್ಟ್, ಪ್ಯಾಂಟ್, ಓವರ್ ಕೋಟ್ ಮತ್ತು ಇತರ ಶಿಸ್ತಿನ ಉಡುಗೆಗಳು, ಮಹಿಳಾ ನೌಕರರು ಖಾದಿ ಅಥವಾ ಖಾದಿ ಸಿಲ್ಕ್ ಸೀರೆ, ಚೂಡಿದಾರ್ ಮತ್ತು ಇತರ ಶಿಸ್ತಿನ ಉಡುಗೆಗಳು ತೊಡತಕ್ಕದ್ದು , ಎಂಎಸ್‌ಐಎಲ್ ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಲಾಗುವುದು.
ಈ ಮೂಲಕ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗುವುದು ಎಂದಿದ್ದಾರೆ . ಈ ಯೋಜನೆಯ ಉದ್ದೇಶ ಖಾದಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಕೈಗಾರಿಕೆಗಳಿಗೆ ಸಹಾಯ ಮಾಡುವುದರೊಂದಿಗೆ ನೌಕರರಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವುದಕ್ಕೆ ಎಂದು ತಿಳಿಸಲಾಗಿದೆ.




