ಮಂಡ್ಯ: ಕರ್ನಾಟಕದಲ್ಲಿ ದಸರಾ ನಾಲ್ಕು ನೂರು ವರ್ಷಗಳ ಹಿಂದೆಯೇ ಆರಂಭಗೊಂಡ ಕಾವೇರಿ ನದಿ ದ್ವೀಪನಗರಿ ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂ ಸವಾರಿ. ಇದಕ್ಕಾಗಿ ಐತಿಹಾಸಿಕ ಪಟ್ಟಣ ಅಣಿಗೊಂಡಿದೆ. ಪ್ರತಿ ವರ್ಷವೂ ಮಂಡ್ಯ ಜಿಲ್ಲಾಡಳಿತದಿಂದ ಶ್ರೀರಂಗಪಟ್ಟಣ ದಸರಾವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು. ಈ ಬಾರಿಯೂ ಅಕ್ಟೋಬರ್ 4 ರಿಂದ 7 ರವರೆಗೆ ನಾಲ್ಕು ದಿನಗಳ ಕಾರ್ಯಕ್ರಮ ಇರಲಿದೆ. ಜಂಬೂಸವಾರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟ, ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ನಾನಾ ಸ್ಪರ್ಧೆಗಳು ನಾಲ್ಕು ದಿನಗಳ ದಸರಾ ಚಟುವಟಿಕೆಯಲ್ಲಿ ಇರಲಿವೆ. ಇಂದು ಬೆಳಿಗ್ಗೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಮಕ್ಕಳು, ಹಿರಿಯರು ಉತ್ಸಾಹದಿಂದ ಭಾಗಿಯಾದರು.
ಇಂದು ಮಧ್ಯಾಹ್ನ 12:30ಕ್ಕೆ ಶ್ರೀರಂಗಪಟ್ಟಣದ ಕಿರಂಗೂರಿನ ಬನ್ನಿ ಮಂಟಪದಲ್ಲಿ “ನಂದಿ ಧ್ವಜ ಪೂಜೆ” ನಡೆಯಲಿದೆ. ಮಧ್ಯಾಹ್ನ 2:30 ರಿಂದ 3 ರವರೆಗೆ ಕಿರಂಗೂರಿನ ಬನ್ನಿ ಮಂಟಪದಿಂದ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಮಹೇಂದ್ರ (ಅಂಬಾರಿ ಆನೆ), ಹಿರಣ್ಯ ಮತ್ತು ಲಕ್ಷ್ಮಿ ( ಕುಮ್ಕಿ ಆನೆಗಳು) ಇರಲಿವೆ. ಈಗಾಗಲೇ ಶ್ರೀರಂಗಪಟ್ಟಣದ ಬನ್ನಿಮಂಟಪದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಹೇಂದ್ರ, ಹಿರಣ್ಯ ಹಾಗೂ ಲಕ್ಷ್ಮಿ ಆನೆಗಳು ಗುರುವಾರ ರಾತ್ರಿಯೇ ಮೈಸೂರಿನಿಂದ ಆಗಮಿಸಿ ಬೀಡು ಬಿಟ್ಟಿವೆ.
ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವಣ್ಣ ಉದ್ಘಾಟಿಸುವರು. ಅವರು ನಂದಿಧ್ವಜ ಪೂಜೆ ನೆರವೇರಿಸಿ ನಂತರ ಪುಷ್ಪಾರ್ಚನೆಯನ್ನು ಮಾಡುವರು. ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಸಹಿತ ಹಲವರು ಭಾಗಿಯಾಗುವರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಪಾಲ್ಗೊಳ್ಳುವರು.
ಹಲವಾರು ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ.ನಾಲ್ಕು ದಿನಗಳ ಚಟುವಟಿಕೆಗಳು ನಡೆಯುತ್ತಿದ್ದು ಜಂಬೂ ಸವಾರಿಯೂ ಇಲ್ಲಿನ ವಿಶೇಷ ಆರ್ಕಷಣೆ. ಮೈಸೂರಿನಿಂದ ಆನೆಗಳು ಆಗಮಿಸಿ ಶ್ರೀರಂಗಪಟ್ಟಣ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ ಎಂದು ಮಂಡ್ಯ ಡಿಸಿ ಡಾ.ಕುಮಾರ ಹೇಳುತ್ತಾರೆ.