ಬಳ್ಳಾರಿ : ಬಿಜೆಪಿ ತೊರೆದು ಹೋದವರು ಒಬ್ಬೊಬ್ಬರಾಗೇ ಮರಳಿ ಗೂಡು ಸೇರುತ್ತಿದ್ದಾರೆ. ಕಳೆದ ವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೈಲೆಂಟ್ ಆಗಿಯೇ ಕಾಂಗ್ರೆಸ್ಗೆ ಕೈ ಕೊಟ್ಟು ಘರ್ವಾಪ್ಸಿಯಾಗಿದ್ದರು. ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡ ಕರ್ನಾಟಕದಲ್ಲಿ ಬಿಜೆಪಿಗೆ ಬಲ ತುಂಬಲು ನಾನ್ ರೆಡಿ ಎಂದಿದ್ದಾರೆ. ಬಳ್ಳಾರಿ ಗಣಿಧಣಿಯ ಈ ಮಾತಿನಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಯಾಗಿದೆ.
ಜನಾರ್ದನ ರೆಡ್ಡಿ ಬಿಜೆಪಿಗೆ ಜೈ ಅನ್ನುತ್ತಿದ್ದಂತೆ, ಶ್ರೀರಾಮುಲು, ರೆಡ್ಡಿ ವಿಷ್ಯವನ್ನು ಹೈಕಮಾಂಡ್ ಬಳಿ ಚರ್ಚೆ ಮಾಡಲು ದಿಡೀರ್ ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಗಾಗಿ ರಾಮುಲು ಕಾದು ಕುಳಿತಿದ್ದಾರೆ. ಅಮಿತ್ ಶಾ ಭೇಟಿ ವೇಳೆ ಜನಾರ್ದನ ರೆಡ್ಡಿ ಬಿಜೆಪಿಗೆ ಬೆಂಬಲ ನೀಡುವ ಹೇಳಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾ ಸೂಚನೆ ನೀಡಿದ್ರೆ, ನಾಳೆಯೇ ಜನಾರ್ದನ ರೆಡ್ಡಿ ದೆಹಲಿಗೆ ತೆರಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ಬಿಜೆಪಿ ಸೇರ್ಪಡೆ ಅಥವಾ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಅಧಿಕೃತ ಮಾಹಿತಿ ಘೋಷಿಸಲಿದ್ದಾರೆ..


