ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆಯೆಂದು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ತಿಳಿಸಿದರು.

ಮಾನ್ಯ ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದಾದ್ಯಂತ ರಸ್ತೆ ಗುಂಡಿಗಳನ್ನು ಯುದ್ದೋಪಾದಿಯಲ್ಲಿ ಮುಚ್ಚಲಾಗುತ್ತಿದೆ. ಈ ಸಂಬಂಧ ಪೂರ್ವ ವಲಯ ಶಿವಾಜಿನಗರ ವ್ಯಾಪ್ತಿಯಲ್ಲಿ ಬರುವ ತಿಮ್ಮಯ್ಯ ರಸ್ತೆಯಲ್ಲಿ ಇಂದು ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಲಿಕೆ ವತಿಯಿಂದ ನಿರಂತರವಾಗಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆದರೆ, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ನಾಗರೀಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ರಸ್ತೆಗಳು ರಸ್ತೆಗಿಳಿದು ಪರಿಶೀಲಿಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಪೂರ್ವ ವಲಯ ವ್ಯಾಪ್ತಿಯಲ್ಲಿ 258.59 ಕಿ.ಮೀ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, ⁠1394 ಕಿ. ಮೀ ಉದ್ದದ ರಸ್ತೆ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1652.59 ಉದ್ದದ ರಸ್ತೆಗಳಿವೆ. ಕಳೆದ 1 ವರ್ಷದಲ್ಲಿ 2390 ರಸ್ತೆ ಗುಂಡಿಗಳು ಮುಚ್ಚಲಾಗಿದ್ದು, ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುತ್ತಿರುವ ದೂರುಗಳನ್ನು ಕಾಲಮಿತಿಯೊಳಗಾಗಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದರು.

ಪೂರ್ವ ವಲಯಕ್ಕೆ ಸಂಬಂಧಿಸಿದಂತೆ ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಕಳೆದ ಏಪ್ರಿಲ್ 2024ರಿಂದ ಇದುವರೆಗೆ ವಾರ್ಡ್ ರಸ್ತೆಗಳಲ್ಲಿ 494 ದೂರುಗಳು, ಪ್ರಮುಖ ರಸ್ತೆಗಳಲ್ಲಿ 537 ದೂರುಗಳು ಬಂದಿದ್ದು, ಒಟ್ಟಾರೆ 1031 ದೂರುಗಳ ಪೈಕಿ ವಾರ್ಡ್ ರಸ್ತೆಗಳಲ್ಲಿ 133 ಗುಂಡಿಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ 132 ರಸ್ತೆಗಳು ಸೇರಿ 265 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ ಬಾಕಿಯಿರುವ 766 ಗುಂಡಿಗಳನ್ನು ಕಾಲಮಿತಿಯೊಳಗಾಗಿ ಮುಚ್ಚಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:

ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಂಜಿನಿಯರ್ ಗಳ ಜೊತೆ ಇಂದು ಸಭೆ ನಡೆಸಿ ಪ್ರಮುಖ ಹಾಗೂ ವಾರ್ಡ್ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಿ ಒಂದು ವಾರದೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿಭಾಗವಾರು ಬರುವ ಕಾರ್ಯಪಾಲಕ ಅಭಿಯಂತತರು ರಸ್ತೆ ಗುಂಡಿಗಳನ್ನು ಮುಚ್ಚಿದ ನಂತರ ಪ್ರಮಾಣೀಕರಣ ಪತ್ರ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ:

ರಸ್ತೆ ಗುಂಡಿ ಮುಚ್ಚು ಕಾರ್ಯ ಪರಿಶೀಲನೆಯ ನಂತರ ತಿಮ್ಮಯ್ಯ ರಸ್ತೆ, ನ್ಯೂ ಮಾರ್ಕೆಟ್ ರಸ್ತೆ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವವರಿಗೆ ಕೂಡಲೆ ತೆರವುಗೊಳಿಸಿ ಮತ್ತೆ ಒತ್ತುವರಿ ಮಾಡದಂತೆ ಕಟ್ಟೆಚ್ಚರಿಕೆ ನೀಡಲಾಯಿತು.

ಈ ವೇಳೆ ಮುಖ್ಯ ಅಭಿಯಂತರರಾದ ಸುಗುಣಾ, ಕಾರ್ಯಪಾಲಕ ಅಭಿಯಂತರರಾದ ಸೈಫುದ್ದೀನ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Verified by MonsterInsights