
ಬೆಂಗಳೂರು: ಅಡುಗೆ ಮಾಡುವ ಸಣ್ಣ ವಿಷಯಕ್ಕೆ ಶುರುವಾದ ಅತ್ತೆ-ಸೊಸೆಯ ಜಗಳವು ಸಾವಿನಲ್ಲಿ ಅಂತ್ಯವಾಗಿದೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಸುಷ್ಮಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದ ಸುಷ್ಮಾ, ಸುಂದರ ಸಂಸಾರದ ಕನಸು ಕಂಡಿದ್ದರು. ಆದರೆ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಪದೇ ಪದೇ ಜಗಳಗಳು ನಡೆಯುತ್ತಿದ್ದು, ಮಾನಸಿಕವಾಗಿ ಅವರು ಕುಸಿದುಹೋಗಿದ್ದರು ಎನ್ನಲಾಗಿದೆ.
ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕಿರಿಕಿರಿ ಉಂಟಾಗುತ್ತಿತ್ತು. ಘಟನೆ ನಡೆದ ದಿನದಂದು ಸಹ ಇದೇ ವಿಷಯವಾಗಿ ದೊಡ್ಡ ಮಟ್ಟದ ಜಗಳ ನಡೆದಿದ್ದು, ಇದರಿಂದ ತೀವ್ರ ಅಸಮಾಧಾನಗೊಂಡ ಸುಷ್ಮಾ ಈ ನಿರ್ಧಾರ ಕೈಗೊಂಡಿದ್ದಾರೆ. ಸುಷ್ಮಾ ಅವರ ಸಾವಿನ ಬೆನ್ನಲ್ಲೇ ಅವರ ಕುಟುಂಬಸ್ಥರು ಪತಿ ಪುನೀತ್ ಕುಮಾರ್ ಮತ್ತು ಅತ್ತೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಪತಿ ಪುನೀತ್ ಕುಮಾರ್ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ, ಘಟನೆಯ ನಂತರ ಅತ್ತೆ ಕಲ್ಪನಾ ಅವರು ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸುಶಿಕ್ಷಿತ ಕುಟುಂಬದಲ್ಲೂ ಇಂತಹ ಸಣ್ಣ ವಿಷಯಗಳು ಜೀವ ತೆಗೆಯುವ ಮಟ್ಟಕ್ಕೆ ತಲುಪಿರುವುದು ಸಮಾಜದಲ್ಲಿ ಕಳವಳ ಮೂಡಿಸಿದೆ.




