ಮುಡಾ ಪ್ರಕರಣದಿಂದ ನನ್ನನ್ನು ಹಿಂದಕ್ಕೆ ಸರಿಸಬೇಕು, ಅಂದರೆ ನನ್ನ ಹೋರಾಟವನ್ನು ಹತ್ತಿಕ್ಕಬೇಕು ಎಂಬ ದುರುದ್ದೇಶದಿಂದ, ನನ್ನ ವಿರುದ್ದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ದಾಖಲು ಮಾಡಿ, ನನ್ನನ್ನು ಬಂಧಿಸಿ, ದಿನಾಂಕ :-೧೯.೧೨.೨೦೨೪ ರಂದು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಯಲಿರುವ ಸಿಬಿಐ ವಿಚಾರಣೆಗೆ ಅಡಚಣೆ ಮಾಡಬೇಕು ಎಂಬ ದುರುದ್ದೇಶದಿಂದ ನನ್ನನ್ನು ಬಂಧಿಸಬೇಕು ಎಂದು ಪ್ರಯತ್ನ ನಡೆಸುತ್ತಿದ್ದರಿಂದ, ನನ್ನ ಸಂಚಾರಿ ದೂರವಾಣಿಯನ್ನು ಆಫ್ ಮಾಡಿ, ಮೈಸೂರು, ಬೆಂಗಳೂರಿಗೆ ಓಡೋಡಿ ಬಂದು, ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ದಿನ ನನ್ನ ವಿರುದ್ದ ದಾಖಲಾಗಿರುವ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ವಿರುದ್ಧ ದೂರು ಮಾಡಿದ್ದ ಸ್ನೇಹಮಯಿ
ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡದ್ದರು. ಈ ಬಗ್ಗೆ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದರು.
ಚಾಮುಂಡೇಶ್ವರಿ ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಅವರ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋದ ಸಿಡಿಯನ್ನು ದೂರಿನೊಂದಿಗೆ ಲಗ್ಗತ್ತಿಸಿದ್ದರು.
ಈ ಹಿನ್ನೆಲೆಯಲ್ಲಿ, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೇವಸ್ಥಾನದ ಕಾರ್ಯದರ್ಶಿ ರೂಪಾ ಅವರು ಸ್ನೇಹಮಯಿ ಕೃಷ್ಣ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾಗಿದೆ.