ಬೆಂಗಳೂರು: ಎಸ್.ಎಂ.ಕೃಷ್ಣ ಅವರು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಬಳಿ ಹೇಳಿಕೊಂಡಂತೆ ಅವರ ಕೊನೆಯ ಆಸೆಯಾಗಿ ಹುಟ್ಟೂರಿನಲ್ಲಿ ಶಾಲೆ ಕಟ್ಟಿಸುವ ಬಗ್ಗೆ ಕುಟುಂಬಸ್ಥರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೃಷ್ಣ ಕುರಿತು ಮಾತನಾಡುವಾಗ ಭಾವೋದ್ವೇಗಗೊಂಡ ಅವರು, ಅವರು ತಮ್ಮ ಕೊನೆಯ ಆಸೆಯನ್ನು ನನ್ನ ಮಗಳ ಬಳಿ ಹೇಳಿಕೊಂಡಿದ್ದರು. ತಮ್ಮ ಹೂಟ್ಟೂರಿನಲ್ಲಿ ಒಂದು ಶಾಲೆ ಕಟ್ಟಬೇಕು ಎಂದು ಹೇಳಿದ್ದಾರೆ. ಇದನ್ನು ಅವರ ಮನೆಯವರ ಬಳಿ ಚರ್ಚೆ ಮಾಡುತ್ತೇನೆ, ಏನು ಮಾಡಬೇಕೋ ಮಾಡುತ್ತೇವೆ ಎಂದು ಹೇಳಿದರು.
ಕೃಷ್ಣ ಅವರು ವೈಯಕ್ತಿಕ ಕಾರಣದಿಂದ ಕಾಂಗ್ರೆಸ್ ಪಕ್ಷವನ್ನು ಬಿಡುವ ತೀರ್ಮಾನಕ್ಕೆ ಬಂದಿದ್ದರು. ಆಗ ನಾನು ಅವರಿಗೆ ಒಂದು ಮಾತು ಹೇಳಿದೆ. ನೀವು ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯಬೇಕು ಎಂದು ಮನವಿ ಮಾಡಿದ್ದೆ. ಅವರು ಆಸ್ಪತ್ರೆಯಲ್ಲಿದ್ದಾಗ ಈ ವಿಚಾರ ಚರ್ಚೆಗೆ ಬಂತು. ಮನೆಯಲ್ಲಿ ಕೆಲವು ಸಮಸ್ಯೆ ಇದ್ದ ಕಾರಣ ನಾವು ಅವರಿಗೆ ತೊಂದರೆ ಮಾಡಲು ಹೋಗಲಿಲ್ಲ ಎಂದು ಡಿ.ಕೆ.ಶಿವಕುಮಾರ್, ತಮ್ಮ ಒಡನಾಟವನ್ನು ನೆನಪಿಸಿಕೊಂಡರು.


