#Exclusive NewsTop Newsರಾಜಕೀಯರಾಜ್ಯಸುದ್ದಿ

ಎಸ್.ಎಂ.ಕೃಷ್ಣ ಅವರು ನನಗೆ ತಂದೆ ಸಮಾನರು : ಡಿಸಿಎಂ ಡಿ.ಕೆ. ಶಿವಕುಮಾರ್

 

ಬೆಂಗಳೂರು :”ಎಸ್.ಎಂ ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆ ಅವರ ಮಾರ್ಗದರ್ಶನಕ್ಕೆ ಸಾಕ್ಷಿ. ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ ಕೃಷ್ಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸ ಹಾಗೂ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಶಿವಕುಮಾರ್ ಅವರು ಎಸ್.ಎಂ ಕೃಷ್ಣ ಅವರ ಕೊಡುಗೆ ನೆನೆದು ಭಾವುಕರಾದರು.

“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ ಕೃಷ್ಣ ಅವರು ವಿಕಾಸ ಸೌಧ ಕಟ್ಟಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ನೀಡಿದರು. ಅವರ ಕಡೆಯ ಬಜೆಟ್ ಗಾತ್ರ 26 ಸಾವಿರ ಕೋಟಿ. ಆದರೆ ಇಂದು ನಮ್ಮ ರಾಜ್ಯದ ಬಜೆಟ್ ಗಾತ್ರ 3.83 ಲಕ್ಷ ಕೋಟಿ. ಆಮೂಲಕ ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು.

ಅವರು ನನ್ನ ಸಂಬಂಧಿ, ನನ್ನ ರಾಜಕೀಯ ಮಾರ್ಗದರ್ಶಕರು ಎಂಬುದು ಬೇರೆ ವಿಚಾರ. ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ನಮಗೆಲ್ಲ ದೊಡ್ಡ ಪರಂಪರೆ ಬಿಟ್ಟುಹೋಗಿದ್ದು, ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅವರಿಂದ ಸಾಕಷ್ಟು ವಿಚಾರ ಕಲಿತ ಹೆಮ್ಮೆ ನಮಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ನನ್ನ ಅವರ ನಡುವಣ ಸಂಬಂಧದ ಬಗ್ಗೆ ಬೇರೆ ದಿನ ಮಾತನಾಡುತ್ತೇನೆ.

ಎಸ್.ಎಂ ಕೃಷ್ಣ ಅವರು ದೂರದೃಷ್ಟಿಯುಳ್ಳ ಶ್ರೇಷ್ಠ ವ್ಯಕ್ತಿ. ರಾಜ್ಯಕ್ಕೆ ಅವರ ಕೊಡುಗೆ, ಅವರ ಜತೆಗಿನ ಒಡನಾಟದ ಬಗ್ಗೆ ಹೇಳಲು ಗಂಟೆಗಟ್ಟಲೆ ಸಮಯಬೇಕು” ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button