ಹಾಸನ: ಜಿಲ್ಲೆಯ ವಿದ್ಯಾನಗರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಹಾಗೂ ನಿವೇಶನ ಮಾಲೀಕ ದೇವರಾಜು ನಡುವಿನ ಜಟಾಪಟಿ ಮತ್ತೊಮ್ಮೆ ಬೀದಿಗೆ ಬಂದಿದೆ. ನ್ಯಾಯಾಲಯದ ಆದೇಶದಂತೆ ಈ ಹಿಂದೆ ನೆಲಸಮಗೊಳಿಸಲಾಗಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅವರು ಮತ್ತೆ ನಿರ್ಮಿಸಲು ಮುಂದಾದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಧ್ವಂಸಗೊಂಡಿದ್ದ ಜಾಗದಲ್ಲಿ ಇಂದು ಪುಷ್ಪಾ ಅವರು ಮತ್ತೆ ಕಾಂಪೌಂಡ್ ನಿರ್ಮಿಸಲು ಕಾರ್ಮಿಕರನ್ನು ಕರೆತಂದಿದ್ದರು. ಇದಕ್ಕೆ ಅಡ್ಡಿಪಡಿಸಿದ ಮಾಲೀಕ ದೇವರಾಜು ಅವರ ವಿರುದ್ಧ ಪುಷ್ಪಾ ಅರುಣ್ಕುಮಾರ್ ಕೆಂಡಾಮಂಡಲರಾದರು. ದಾಖಲೆ ಇದ್ದರೆ ತೋರಿಸು, ಇಲ್ಲಿ ಬಂದು ರೌಡಿಸಂ ಮಾಡಬೇಡ. ಜಡ್ಜ್ ಅನ್ನು ಇಲ್ಲೇ ಕರೆಸು, ಇಲ್ಲೇ ತೀರ್ಮಾನವಾಗಲಿ” ಎಂದು ಕಿಡಿಕಾರಿದರು.
ಯಶ್ ಮನೆ ಮುಂದೆ ಬಿಲ್ಡಪ್ ತೆಗೆದುಕೊಳ್ಳಲು ಬಂದಿದ್ದೀಯಾ? ನಾನು ಇದೇ ಊರ ಮಗಳು, ನನಗೆ ಹೆದರಿಸಬೇಡ” ಎಂದು ಹರಿಹಾಯ್ದರು. ಈ ವೇಳೆ ಸ್ಥಳದಲ್ಲಿ ಗಲಾಟೆ ತಾರಕಕ್ಕೇರುತ್ತಿದ್ದಂತೆ ಬಡಾವಣೆ ಠಾಣೆಯ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸ್ಥಳದಿಂದ ಕಳುಹಿಸಿ, ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.
ಘಟನೆಯ ಹಿನ್ನೆಲೆ:
ಹಾಸನದ ವಿದ್ಯಾನಗರದಲ್ಲಿರುವ ಯಶ್ ಅವರ ಮನೆ ಸಮೀಪದ ಸುಮಾರು 1,500 ಅಡಿ ಜಾಗವನ್ನು ಪುಷ್ಪಾ ಅವರು ಒತ್ತುವರಿ ಮಾಡಿದ್ದಾರೆ ಎಂದು ಜಿಪಿಎ ಹೋಲ್ಡರ್ ದೇವರಾಜು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ, ನ್ಯಾಯಾಲಯದ ಅನುಮತಿಯ ಮೇರೆಗೆ ಕಳೆದ ಜನವರಿ ಮೊದಲ ವಾರದಲ್ಲಿ ಅಕ್ರಮ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿತ್ತು.


