ಬೆಂಗಳೂರು: ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಹೈ-ಪವರ್ ಟೀಮ್ ರಚನೆಯಾಗಿದ್ದು ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರ ನಿಗೂಢ ಸಾವಿನ ಪ್ರಕರಣ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಈ ಸಾವಿನ ಹಿಂದೆ ಹಲವು ರಾಜಕೀಯ ಮತ್ತು ವ್ಯವಹಾರಿಕ ಆಯಾಮಗಳಿವೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ ರಚಿಸಿ ಆದೇಶ ಹೊರಡಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ.
ವಂಶಿಕೃಷ್ಣ ನೇತೃತ್ವದಲ್ಲಿ ವಿಶೇಷ ತಂಡ
ಈ ಹೈ-ಪ್ರೊಫೈಲ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತರಾದ ವಂಶಿಕೃಷ್ಣ ಅವರಿಗೆ ವಹಿಸಲಾಗಿದೆ. ಈ ತಂಡದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಸೇರಿದಂತೆ ದಕ್ಷ ಅಧಿಕಾರಿಗಳಿದ್ದಾರೆ. ಇದುವರೆಗೆ ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ಈಗ ಅಧಿಕೃತವಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗುತ್ತಿದೆ. ಪ್ರಕರಣದ ಎಫ್‌ಐಆರ್, ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ಇತರ ಪ್ರಮುಖ ದಾಖಲೆಗಳನ್ನು ಎಸ್‌ಐಟಿ ಶೀಘ್ರವೇ ವಶಕ್ಕೆ ಪಡೆಯಲಿದೆ.
ಪ್ರಮುಖವಾಗಿ ಕಳೆದ ಕೆಲವು ದಿನಗಳಿಂದ ಐಟಿ ದಾಳಿಗೆ ಒಳಗಾಗಿದ್ದ ರಾಯ್, ಅಧಿಕಾರಿಗಳ ಕಿರುಕುಳದಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆಯೇ? ಉದ್ಯಮದ ಹೊರತಾಗಿ ಯಾರಾದರೂ ರಾಯ್ ಅವರ ಮೇಲೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೇ ಅಥವಾ ಹಣಕ್ಕಾಗಿ ಒತ್ತಡ ಹೇರುತ್ತಿದ್ದರೇ? ಘಟನೆ ನಡೆದ ಸಮಯದಲ್ಲಿ ಸಿಸಿಟಿವಿ ಇಲ್ಲದಿರುವುದು ದೊಡ್ಡ ಸಂಶಯಕ್ಕೆ ಕಾರಣವಾಗಿದ್ದು, ಇದು ಯೋಜಿತ ಸಂಚಿರಬಹುದೇ?ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದಂತೆ, ಚುನಾವಣಾ ಫಂಡ್‌ಗಾಗಿ ಕೇಳಲಾದ ನೂರಾರು ಕೋಟಿ ಹಣದ ಬೇಡಿಕೆಗೂ ಈ ಸಾವಿಗೂ ಸಂಬಂಧವಿದೆಯೇ?ತನಿಖಾ ತಂಡವು ಈ ಸಾವಿನ ಸುತ್ತಲಿರುವ ಹಲವು ಕರಾಳ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.
ಎಸ್‌ಐಟಿ ಮುಖ್ಯಸ್ಥ ವಂಶಿಕೃಷ್ಣ ಅವರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಿಬ್ಬಂದಿಗಳನ್ನು ಎಸ್‌ಐಟಿ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.ಒಬ್ಬ ಯಶಸ್ವಿ ಉದ್ಯಮಿಯ ಈ ದಿಢೀರ್ ಸಾವು ಇಡೀ ರಾಜ್ಯದ ಗಮನ ಸೆಳೆದಿದ್ದು, ಎಸ್‌ಐಟಿ ತನಿಖೆಯಿಂದ ಹೊರಬೀಳುವ ಸತ್ಯಾಂಶಕ್ಕಾಗಿ ಹೂಡಿಕೆದಾರರು ಮತ್ತು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.


