Thursday, November 20, 2025
19.9 C
Bengaluru
Google search engine
LIVE
ಮನೆ#Exclusive Newsಅಣು ಒಪ್ಪಂದ ವಿಚಾರದಲ್ಲಿ ಅಮೆರಿಕಗೆ ಬೆವರಿಳಿಸಿದ್ದ ಸಿಂಗ್..

ಅಣು ಒಪ್ಪಂದ ವಿಚಾರದಲ್ಲಿ ಅಮೆರಿಕಗೆ ಬೆವರಿಳಿಸಿದ್ದ ಸಿಂಗ್..

1974ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ದೇಶದಲ್ಲಿ ಮೊದಲ ಬಾರಿಗೆ ಅಣು ಬಾಂಬ್ ಪರೀಕ್ಷೆ ನಡೆದಿತ್ತು. ಅದರಿಂದ ಸಿಟ್ಟಿಗೆದ್ದ ಅಮೆರಿಕ ಭಾರತದ ಮೇಲೆ ನಿರ್ಬಂಧ ಹೇರಿತ್ತು. ನಂತರದ ದಿನಗಳಲ್ಲಿ ಅದೇ ದೇಶ ಭಾರತವನ್ನು ‘ಅಣ್ವಸ್ತ್ರ ರಾಷ್ಟ್ರ’ ಎಂದು ಪರಿಗಣಿಸಿತು. ಅದಕ್ಕೆ ಕಾರಣ ಅಣು ಒಪ್ಪಂದ! ಇದರ ಹಿಂದಿನ ರೂವಾರಿಯೇ ಡಾ.ಮನಮೋಹನ್ ಸಿಂಗ್.ಭಾರತ ಹಾಗೂ ಅಮೆರಿಕ ನಡುವೆ ಅಣು ಒಪ್ಪಂದದ ಹಿಂದಿನ ಮಾಸ್ಟರ್ ಮೈಂಡ್ ಮನಮೋಹನ್ ಸಿಂಗ್. ಅಸಲಿಗೆ 2005ರ ಜು.18ರಂದು ಭಾರತ ಹಾಗೂ ಅಮೆರಿಕ ನಡುವೆ ಅಣು ಒಪ್ಪಂದ ಕುರಿತ ಘೋಷಣೆ ಹೊರಬಿತ್ತು. ಅದರ ಹಿಂದಿನ ದಿನ ಅಮೆರಿಕದಲ್ಲಿ ಹೈಡ್ರಾಮಾ ನಡೆದಿತ್ತು. ಈ ಒಪ್ಪಂದವೇ ಬೇಡ ಎಂದು ಸಿಂಗ್ ಮುನಿಸಿಕೊಂಡು ಕೂತಿದ್ದರು.

 

ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಸಿಂಗ್ ನಡುವಿನ ಮಾತುಕತೆಯಂತೆ ಅಂತಾರಾಷ್ಟ್ರೀಯ ಸುರಕ್ಷತಾ ಸಂಸ್ಥೆಗಳ ತಪಾಸಣೆಯಿಂದ ಭಾರತದ 6 ರಿಂದ 8 ಅಣುಸ್ಥಾವರಗಳನ್ನು ಹೊರಗಿಡುವ ನಿಲುವಿಗೆ ಬರಲಾಗಿತ್ತು. ಭಾರತದ ಜತೆ ಅಣು ಒಪ್ಪಂದ ಮಾಡಿಕೊಳ್ಳುವುದು ಅಮೆರಿಕದ ಕೆಲವು ಪ್ರಭಾವಿಗಳಿಗೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕೆ ವಿರೋಧಿಸಿದ್ದ ವ್ಯಕ್ತಿಗಳು ಅಣು ಸ್ಥಾವರಗಳ ತಪಾಸಣೆ ವಿನಾಯಿತಿಯನ್ನು ಎರಡಕ್ಕೆ ಇಳಿಸಿದ್ದರು. ಇದು ಮನಮೋಹನ್​ ಸಿಂಗ್‌ಗೆ ಗೊತ್ತಾಗಿದೆ.ಅಣು ಒಪ್ಪಂದವನ್ನು ಅಮೆರಿಕ ಅಧಿಕಾರಿಗಳು ತಮಗೆ ಬೇಕಾದಂತೆ ಮಾಡಿಕೊಂಡಿದ್ದಾರೆ ಎಂದು ರಾತ್ರೋರಾತ್ರಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಅಮೆರಿಕದ ಅಂದಿನ ಅಧ್ಯಕ್ಷರಿಗೆ ಗೊತ್ತಾಗಿದೆ. ಕೂಡಲೇ ಸಿಂಗ್ ತಂಗಿದ್ದ ಹೋಟೆಲ್​​ಗೆ ಅಮೆರಿಕ ವಿದೇಶಾಂಗ ಸಚಿವೆ ಕಾಂಡೋಲಿಸಾ ಅವರನ್ನು ಸಮಾಧಾನ ಮಾಡಲು ಕಳುಹಿಸುತ್ತಾರೆ. ಅದಕ್ಕೆ ಮತ್ತಷ್ಟು ಸಿಟ್ಟಿಗೆದ್ದ ಸಿಂಗ್, ನಿಮ್ಮ ಜೊತೆ ನಾನು ಮಾತನಾಡುವುದಿಲ್ಲ. ಬುಷ್ ಜೊತೆಯೇ ಮಾತಾನಾಡ್ತೇನೆ ಎಂದು ವಾಪಸ್ ಕಳುಹಿಸಿದ್ದರು.

ಕೊನೆಗೆ ಕಾಂಡೋಲಿಸಾ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಬಳಿ ತೆರಳಿದ್ದರು. ಅಲ್ಲಿ ನಡೆದ ಮಾತುಕತೆ ಬಳಿಕ ಅಮೆರಿಕ ವಿದೇಶಾಂಗ ಸಚಿವೆ ಜೊತೆ ಸಿಂಗ್ ಮಾತುಕತೆ ನಡೆಸಿದರು. ಭಾರತದ ಬೇಡಿಕೆಗೆ ಕೊನೆಗೂ ಅಮೆರಿಕ ಒಪ್ಪಿಕೊಂಡಿತು. ಮರುದಿನ ಒಪ್ಪಂದ ಘೋಷಣೆ ಆಯಿತು. ಅದಕ್ಕೆ 2008ರಲ್ಲಿ ಅಧಿಕೃತವಾಗಿ ಸಹಿ ಹಾಕಲಾಯಿತು.

ಅಂದ್ಹಾಗೆ ಒಪ್ಪಂದಕ್ಕಾಗಿ ಸಿಂಗ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಮೆರಿಕ ಜೊತೆಗಿನ ಅಣು ಒಪ್ಪಂದಕ್ಕೆ ಯುಪಿಎ ಮಿತ್ರಕೂಟದ ಅಂಗಪಕ್ಷವಾಗಿದ್ದ ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆಗ ಪ್ರಧಾನಿ ಹುದ್ದೆಗೆ ಸಿಂಗ್ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಒಪ್ಪಂದದ ಕಾರಣ ಯುಪಿಎ ಸರ್ಕಾರ ಬೀಳುವ ಹಂತ ತಲುಪಿತ್ತು. ಮನಮೋಹನ್ ಸಿಂಗ್​ಗೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸ್ ಪಡೆದುಕೊಂಡಿದ್ದವು. ಅಲ್ಲದೇ ಅವಿಶ್ವಾಸಮತ ನಿರ್ಣಯ ಮಂಡಿಸಿದ್ದವು. ಆದರೂ ಸಿಂಗ್ ತಮ್ಮ ಪಟ್ಟು ಮಾತ್ರ ಬಿಟ್ಟಿರಲಿಲ್ಲ. ಅಮೆರಿಕ ಜೊತೆ ಅಣು ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments