ತುಮಕೂರು: ನಿಜಕ್ಕೂ ಇದೊಂದು ಮನಮಿಡಿಯುವ ಸುದ್ದಿ. ಆ ಊರ ಜನ ಅದ್ಯಾವ ಪಾಪ ಮಾಡಿದ್ರೋ ಗೊತ್ತಿಲ್ಲ..ಇರೋಕು ಸರಿಯಾದ ಸೂರುಗಳಿಲ್ಲ, ಇನ್ನು ಸತ್ತ ಮೇಲಾದ್ರೂ ನೆಮ್ಮದಿಯಾಗಿ ಮಣ್ಣಾಗೋಣ ಅಂದ್ರೆ ಅದಕ್ಕೂ ಜಾಗವಿಲ್ಲ. ಇಂತಹದ್ದೊಂದು ಹೀನ ಸ್ಥಿತಿಯಲ್ಲಿದ್ದಾರೆ ಆ ಊರ ಜನ
ಹೌದು.. ತುಮಕೂರು ತಾಲೂಕಿನ ದುರ್ಗದಹಳ್ಳಿ ನಿಸರ್ಗ ಪ್ರದೇಶ. ಪಕ್ಕದಲ್ಲೇ ವಿಶ್ವ ವಿಖ್ಯಾತ ದೇವರಾಯನದುರ್ಗವಿದೆ. ಆ ಪ್ರವಾಸಿ ತಾಣದ ಮಡಿಲಲ್ಲಿರೋ ಜನ ಮಾತ್ರ ನಿತ್ಯ ಒಂದಲ್ಲ ಒಂದು ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಒಂದು ಕಡೆ ಗ್ರಾನೈಟ್ ಉದ್ಯಮಿಗಳ ಕಾಟ..ಮತ್ತೊಂದು ಕಡೆ, ನೆಮ್ಮದಿಯಾಗಿ ಪ್ರಾಣ ಬಿಟ್ರೂ ಹೂಳೋಕೆ ಜಾಗವಿಲ್ಲದ ಸಂಕಟ..
ಅಂದಾಗೆ ದುರ್ಗದಹಳ್ಳಿಯ ತಿಮ್ಮರಾಜು ಎಂಬುವವರ ತಂದೆ ಪೆದ್ದಯ್ಯ ವಯೋಸಹಯ ಅನಾರೋಗ್ಯದಿಂದ ಮೃತಪಟ್ಟರು. ಜಮೀನು ಇದ್ದಿದ್ರೆ, ಅವರವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಳ್ತಾರೆ. ಆದ್ರೆ ಜಮೀನು ಇಲ್ಲದವರ ಪಾಡೇನು ಸ್ಮಶಾನವೇ ಇಲ್ಲದ ಊರಲ್ಲಿ ಹೆಣ ಹೂಳೋದಾದ್ರೂ ಎಲ್ಲಿ ಅನ್ನೋ ಚಿಂತೆ ತಂದೆ ತೀರಿದ ಬಳಿಕ ತಿಮ್ಮರಾಜುರನ್ನ ಕಾಡಿದೆ. ಇದ್ರಿಂದ ಬೇಸತ್ತ ತಿಮ್ಮರಾಜು ತಂದೆಯವರ ಅಂತ್ಯಸಂಸ್ಕಾರವನ್ನ ರಸ್ತೆ ಬದಿಯಲ್ಲಿಯೇ ಮಾಡಿ ಮುಗಿಸಿದ್ದಾರೆ. ಈ ವಿಚಾರ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
ದುರ್ಗದಹಳ್ಳಿಯಿಂದ ತಿಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ದುರ್ಗದಹಳ್ಳಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನವನ್ನ ಮಂಜೂರು ಮಾಡುವಂತೆ ಹಲವು ಬಾರಿ ಮನವಿ ಕೊಟ್ರು ಜಿಲ್ಲಾಡಳಿತವಾಗಲಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಕ್ಯಾರೆ ಅಂದಿಲ್ಲ..ಇನ್ನು ತಹಶೀಲ್ದಾರ್ ರವರಿಗೆ ಮನವಿ ಕೊಟ್ರು ಪ್ರಯೋಜನವಾಗಿಲ್ಲ. ಹೀಗಾಗಿ ಊರಲ್ಲಿ ಯಾರೇ ಮೃತಪಟ್ರು ಎಲ್ಲಿ ಹೂಳೋದು ಎಂಬ ಚಿಂತೆ ಗ್ರಾಮಸ್ಥರನ್ನ ಕಾಡುತ್ತಲೇ ಇದೆ. ಅದ್ಯಾವಾಗ ರಸ್ತೆ ಬದಿಯಲ್ಲಿ ಶವ ಹೂತ ವಿಚಾರ ವೈರಲ್ ಆಯ್ತೋ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.. ಈಗಲಾದ್ರೂ ಗ್ರಾಮದ ಜನರಿಗೆ ಸ್ಮಶಾನ ಜಾಗ ಲಭಿಸುತ್ತಾ ಕಾದು ನೋಡಬೇಕು.