ಭೋಪಾಲ್: ಜೈಲಿನೊಳಗೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧವಾಗಿರುವ ನಡುವೆಯೇ, ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದ ಯುವತಿಯೊಬ್ಬಳು ಜೈಲಿನೊಳಗೇ ರೀಲ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿರುವ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಜೈಲಿನ ಭದ್ರತಾ ವ್ಯವಸ್ಥೆ ಮತ್ತು ಅಧಿಕಾರಿಗಳ ಮೇಲ್ವಿಚಾರಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.ಛತ್ತೀಸ್‌ಗಢದ ಅತ್ಯಂತ ಸುರಕ್ಷಿತ ಜೈಲು ಎಂದು ಹೆಸರಾಗಿದ್ದ ರಾಯ್‌ಪುರ ಕೇಂದ್ರ ಕಾರಾಗೃಹ ಇದೀಗ ಈ ವೈರಲ್ ವಿಡಿಯೋ ಕಾರಣದಿಂದ ಸುದ್ದಿಯಲ್ಲಿದೆ. ಜೈಲಿಗೆ ಭೇಟಿ ನೀಡುವವರಿಗೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಯುವತಿ ಜೈಲಿನ ಸಂದರ್ಶಕ ಕೋಣೆಯೊಳಗೆ ನಿರ್ಬಂಧವಿಲ್ಲದೆ ವೀಡಿಯೋ ರೆಕಾರ್ಡ್ ಮಾಡಿರುವುದು ಅಚ್ಚರಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕ್ಲಿಪ್‌ನಲ್ಲಿ ಯುವತಿ ಭಾವನಾತ್ಮಕವಾಗಿ ಕ್ಯಾಮೆರಾದ ಮುಂದೆ ಮಾತನಾಡುತ್ತಾ,ಇಂದು ನನ್ನ ಲವರ್ ಹುಟ್ಟುಹಬ್ಬ. ಅವನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬಾ ನೋವುಂಟುಮಾಡುತ್ತದೆ. ಅವನ ಪ್ರತಿಕ್ರಿಯೆ ಏನೆಂದು ನೋಡೋಣ ಎಂದು ಹೇಳುತ್ತಿರುವುದು ಕಾಣಿಸುತ್ತದೆ.ಸಂದರ್ಶಕ ಕೋಣೆಯೊಳಗೆ ತನ್ನ ಪ್ರಿಯಕರನೊಂದಿಗೆ ಮಾತನಾಡುವ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡು, ನಂತರ ಅದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ವೀಡಿಯೋದಲ್ಲಿ ಕಾಣಿಸುತ್ತಿರುವ ಕೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಆತ ಪ್ರಸ್ತುತ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.ಈ ಘಟನೆ ಹೊರಬಿದ್ದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಷ್ಟೊಂದು ಕಟ್ಟುನಿಟ್ಟಿನ ಜೈಲಿನಲ್ಲಿ ಮೊಬೈಲ್ ಹೇಗೆ ಒಳಗೆ ಹೋಗಿತು?ಭದ್ರತೆ ಕೇವಲ ಕಾಗದದ ಮೇಲಷ್ಟೇ ಇದೆಯೇ? ಎಂಬ ಪ್ರಶ್ನೆ ಕೇಳಿದ್ದಾರೆ .
ಈ ವಿಷಯಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದು ಕೇವಲ ಭಾವನಾತ್ಮಕ ಭೇಟಿಯಲ್ಲ, ಜೈಲು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಈ ಘಟನೆ ಜೈಲು ಆಡಳಿತಕ್ಕೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.


