ಅಹಮದಾಬಾದ್: ೨೦೨೬ರ ಟಿ ೨೦ ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ಸೂಪರ್ ೮ಕ್ಕೆ ಲಗ್ಗೆ ಹಾಕಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಸೇರಿದಂತೆ ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿನಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಇದರ ಮಧ್ಯೆ ಭಾರತ ತಂಡಕ್ಕೆ ಸಂಕಷ್ಟವೊಂದು ಎದುರಾಗಿದ್ದು, ಸ್ಟಾರ್ ಪ್ಲೇಯರ್ ಓರ್ವರು ಗಾಯಗೊಂಡಿದ್ದಾರೆ.

ಭಾನುವಾರದಂದು ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ತನ್ನ ಸೂಪರ್ ೮ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಇದರ ಮಧ್ಯೆ ಅಭ್ಯಾಸದ ವೇಳೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹೊಡೆದ ಚೆಂಡು ನೇರವಾಗಿ ಮೊಹಮ್ಮದ್ ಸಿರಾಜ್ ಕಾಲಿಗೆ ಬಿದ್ದಿದ್ದು, ಇದರಿಂದ ಅವರು ಗಾಯಗೊಂಡಿದ್ದು ಹಾಗಾಗಿ ಅರ್ಧದಲ್ಲೇ ಅಭ್ಯಾಸವನ್ನು ಬಿಟ್ಟು ಹೊರನಡೆದಿದ್ದಾರೆ.
ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ ಬೌಲರ್ ಸಿರಾಜ್ ಮೈದಾನಕ್ಕೆ ಬಂದ್ರೂ ಸಹ ಸರಿಯಾಗಿ ನಡೆಯಲು ಕಷ್ಟಪಡುತಿದ್ದರಷ್ಟೇ, ಇದರಿಂದ ತಂಡದಲ್ಲಿ ಆತಂಕ ಹೆಚ್ಚಾಗಿದೆ. ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬ್ಯಾಕಪ್ ಬೌಲರ್ ಆಗಿದ್ರೂ ಸಹ ಆಡುವ ೧೧ರ ಬಳಗದಲ್ಲಿ ಅವಕಾಶ ಪಡೆದುಕೊಂಡು ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಅವರು ಗಾಯಗೊಂಡಿರುವುದು ತಂಡಕ್ಕೆ ಹೆಚ್ಚಿನ ಟೆನ್ಸನ್ ಉಂಟು ಮಾಡಿದೆ.
ವಿಶ್ವಕಪ್ ಟೂರ್ನಿ ಆರಂಭಗೊಂಡಾಗಿನಿಂದಲೂ ತಂಡದಲ್ಲಿ ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಭಿಷೇಕ್ ಶರ್ಮಾ ಸೇರಿದಂತೆ ಅನೇಕರು ಅನಾರೋಗ್ಯದಿಂದಾಗಿ ಕೆಲ ಪಂದ್ಯಗಳಿಂದ ಹೊರಗೆ ಉಳಿದಿದ್ದರು. ಟೀಂ ಇಂಡಿಯಾದ ಬೌಲರ್ ಹರ್ಷಿತ್ ರಾಣಾ ಜಾಗದಲ್ಲಿ ಅವಕಾಶ ಪಡೆದುಕೊಂಡಿರುವ ಮೊಹಮ್ಮದ್ ಸಿರಾಜ್ ತಾನು ಕಣಕ್ಕಿಳಿದಿದ್ದ ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲೇ ೩ ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.
ಲೀಗ್ ಹಂತದಲ್ಲಿ ಟೀಂ ಇಂಡಿಯಾ ಯುಎಸ್‌ಎ, ಪಾಕಿಸ್ತಾನ, ನಮೀಬಿಯಾ ಹಾಗೂ ನೆದರ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿದ್ದು, ನಾಳೆ ಸೂಪರ್‌೮ರಲ್ಲಿ ಹರಿಣಿಗಳ ಸವಾಲು ಎದುರಸಲಿದೆ. ಟೀಂ ಇಂಡಿಯಾ ತಂಡದಲ್ಲಿ ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್ ಇರಲಿದ್ದಾರೆ.


