
ಬೆಂಗಳೂರು: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಟೀಂ ಇಂಡಿಯಾ ವಿಶ್ವಚಾಂಪಿಯನ್ ಪಟ್ಟಕ್ಕೇರಿದೆ. ಇಡೀ ದೇಶವೇ ಇದರ ಸಂಭ್ರಮದಲ್ಲಿ ಮುಳುಗಿದೆ. ಆದರೆ, ಸಂಭ್ರಮಾಚರಣೆ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ FIR ದಾಖಲಾಗಿದೆ. ಇದರಿಂದ ಸ್ಟಾರ್ ಆಲ್ರೌಂಡರ್ಗೆ ಇದೀಗ ಸಂಕಷ್ಟ ಬಂದೊದಗಿದೆ.
ಅಮಹದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ಗೆಲುವಿನ ಬಳಿಕ ಸಂಭ್ರಮಾಚರಣೆ ವೇಳೆ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜಕ್ಕೆ ಅಪಚಾರವೆಸಗಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರಿಗೆ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದು, ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅರ್ಜಿದಾರ ವಕೀಲ ವಾಜಿದ್ ಖಾನ್ ಪುಣೆ ಪೊಲೀಸರ ಮೊರೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿವಾಜಿ ನಗರ ಪೊಲೀಸ್ ಠಾಣಾಧಿಕಾರಿ ಮಾಹಿತಿ ದೃಢಪಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಗೆಲುವಿನ ಬಳಿಕ ಸಂಭ್ರಮಾಚರಣೆ ಮಾಡಿದ್ದ ಹಾರ್ದಿಕ್ ತಮ್ಮ ದೇಹಕ್ಕೆ ತ್ರಿವರ್ಣ ಧ್ವಜ ಸುತ್ತಿಕೊಂಡಿದ್ದರು ಹಾಗೂ ಮೈದಾನದಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾರೆಂದು ವಕೀಲರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದು ಕಾನೂನಿನಡಿ ಅಪರಾಧವಾಗಿದ್ದು, ಪಾಂಡ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ರಾಷ್ಟ್ರಧ್ವಜದ ಘನತೆ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಕೀಲರು ಸಲ್ಲಿಸಿರುವ ಅರ್ಜಿಯಲ್ಲೇನಿದೆ?
ಸಂಭ್ರಮಾಚರಣೆ ವೇಳೆ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಕೇವಲ ಪ್ರದರ್ಶನ ಮಾಡಿಲ್ಲ. ಅದನ್ನು ತಮ್ಮ ದೇಹಕ್ಕೆ ಸುತ್ತಿಕೊಂಡಿದ್ದರು. ಇದು ಭಾರತೀಯ ಧ್ವಜ ಸಂಹಿತೆಯ ಉಲ್ಲಂಘನೆ. ರಾಷ್ಟ್ರಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯ. ಆದರೆ ಹಾರ್ದಿಕ್ ನಡೆ ಕಾನೂನುಬಾಹಿರವಾಗಿದ್ದು, ಅವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಒತ್ತಾಯ ಮಾಡಿದ್ದಾರೆ.

ಇನ್ನೂ ಸಂಭ್ರಮಾಚರಣೆ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಕೊಂಚ ಅತಿಯಾಗಿ ವರ್ತನೆ ಮಾಡಿದ್ದು ಸಹ ಎಲ್ಲರ ಗಮನ ಸೆಳೆದಿತ್ತು. ಮೈದಾನದಲ್ಲೇ ಪರಸ್ಪರ ಹೆಗಲ ಮೇಲೆ ಕೈಹಾಕಿ ಡ್ಯಾನ್ಸ್ ಮಾಡಿದ್ದ ಇವರು, ಪ್ರಶಸ್ತಿ ವಿತರಣೆ ಮಾಡುವ ವೇದಿಕೆ ಮೇಲೆ ಒಟ್ಟಿಗೆ ಮಲಗಿಕೊಂಡಿದ್ದರು. ಈ ವಿಷಯ ಲಕ್ಷಾಂತರ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಷಯವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಸಹ ಮಾಡಿದ್ದರು.




