Top Newsರಾಜಕೀಯರಾಜ್ಯಸುದ್ದಿ

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್..! ಇನ್ಮುಂದೆ ‘ಲೈಫ್ ಸರ್ಟಿಫಿಕೇಟ್’ ಕಡ್ಡಾಯ?

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸರ್ಕಾರದ ಹಣ ದುರುಪಯೋಗವಾಗುವುದನ್ನು ತಡೆಯಲು ಮತ್ತು ಮೃತ ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗುವುದನ್ನು ನಿಲ್ಲಿಸಲು ಫಲಾನುಭವಿಗಳಿಗೆ ಪ್ರತಿ ವರ್ಷ ‘ಜೀವಿತ ಪ್ರಮಾಣ ಪತ್ರ’ ಕಡ್ಡಾಯಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ಈ ಮಹತ್ವದ ಬದಲಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿಗಳು ಈಗಾಗಲೇ ಲಿಖಿತ ಆದೇಶ ನೀಡಿದ್ದಾರೆ. ಈ ಕ್ರಮವು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಅನಗತ್ಯ ನಷ್ಟವನ್ನು ತಪ್ಪಿಸುವ ಉದ್ದೇಶ ಹೊಂದಿದೆ.

ಪ್ರಸ್ತುತ ರಾಜ್ಯದಲ್ಲಿ ಸುಮಾರು 1.24 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಆದರೆ, ಫಲಾನುಭವಿಗಳು ಮರಣ ಹೊಂದಿದರೂ ಆ ಮಾಹಿತಿ ಇಲಾಖೆಗೆ ಲಭ್ಯವಾಗದ ಕಾರಣ ಮೃತಪಟ್ಟವರ ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ಅರ್ಹರಿಗೆ ಸೇರಬೇಕಾದ ಹಣವು ಪೋಲಾಗುತ್ತಿದೆ ಎಂಬ ಕಳವಳ ವ್ಯಕ್ತವಾಗಿದೆ.

ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ತಾವು ಜೀವಂತವಿರುವ ಬಗ್ಗೆ ಬ್ಯಾಂಕ್‌ಗಳಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸುವ ಮಾದರಿಯನ್ನೇ ಗೃಹಲಕ್ಷ್ಮಿ ಯೋಜನೆಗೂ ಅನ್ವಯಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ, ಪ್ರತಿ ಫಲಾನುಭವಿಯೂ ವರ್ಷಕ್ಕೊಮ್ಮೆ ಬ್ಯಾಂಕ್ ಅಥವಾ ಸೇವಾ ಕೇಂದ್ರಗಳ ಮೂಲಕ ಬಯೋಮೆಟ್ರಿಕ್ ನೀಡಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕಾಗುತ್ತದೆ. ಇದರಿಂದ ಉಳಿತಾಯವಾಗುವ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂಬುದು ಸರ್ಕಾರದ ಆಶಯವಾಗಿದೆ.

Comments (0)

Your email address will not be published. Required fields are marked *

Back to top button