
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗಾಗಿ ಕಾಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ದೊಡ್ಡ ಶಾಕ್ ನೀಡಲು ಮುಂದಾಗಿದೆ. ಮಾರ್ಚ್ ಎರಡನೇ ವಾರದಲ್ಲಿ ಹಣ ಬಿಡುಗಡೆಯಾಗುವ ಸಾಧ್ಯತೆಗಳ ನಡುವೆಯೇ, ಫಲಾನುಭವಿಗಳ ಪಟ್ಟಿಯಿಂದ ಲಕ್ಷಾಂತರ ರೈತರ ಹೆಸರನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇವಲ ಅರ್ಹ ರೈತರಿಗೆ ಮಾತ್ರ ಯೋಜನೆಯ ಲಾಭ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಬೃಹತ್ ಮರುಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ.
ಸರ್ಕಾರ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ದೇಶಾದ್ಯಂತ ಸುಮಾರು 70 ಲಕ್ಷ ಅನರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮತ್ತು ನಿಗದಿತ ಭೂಮಿಗಿಂತ ಹೆಚ್ಚಿನ ಜಮೀನು ಹೊಂದಿರುವವರು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದ್ದು, ಅಂತವರ ಹೆಸರನ್ನು ಪಟ್ಟಿಯಿಂದ ಶಾಶ್ವತವಾಗಿ ಅಳಿಸಲು ಸಿದ್ಧತೆ ನಡೆಸಲಾಗಿದೆ.
ಈ ಮರುಪರಿಶೀಲನೆಯಲ್ಲಿ ಮುಖ್ಯವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರಿಗೆ ಸಂಕಷ್ಟ ಎದುರಾಗಲಿದೆ. ಪದೇ ಪದೇ ಸೂಚನೆ ನೀಡಿದರೂ ಇ-ಕೆವೈಸಿ ಅಪ್‌ಡೇಟ್ ಮಾಡದ ಲಕ್ಷಾಂತರ ರೈತರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದಾಗಿ ಅರ್ಹ ರೈತರಿಗೂ ಸಹ ತಾಂತ್ರಿಕ ಕಾರಣಗಳಿಂದಾಗಿ ಹಣ ಕೈತಪ್ಪುವ ಭೀತಿ ಎದುರಾಗಿದೆ.
ಮಾರ್ಚ್ ಎರಡನೇ ವಾರದಲ್ಲಿ 22ನೇ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅದಕ್ಕೂ ಮೊದಲು ರೈತರು ತಮ್ಮ ಸ್ಟೇಟಸ್ ಪರಿಶೀಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅರ್ಹ ರೈತರು ತಕ್ಷಣವೇ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದರೆ ಮುಂದಿನ ಕಂತಿನ ಹಣದಿಂದ ವಂಚಿತರಾಗಲಿದ್ದಾರೆ. ಈ ಕಠಿಣ ಕ್ರಮವು ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕುವ ಗುರಿ ಹೊಂದಿದೆ.




