
5 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ , ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ 15 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಜೈಲಿನ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕಾರಾಗೃಹದಿಂದ ಹೊರಬಂದಿದ್ದಾರೆ.

ನ್ಯಾಯಾಲಯವು ಶಾಸಕರಿಗೆ 2 ಲಕ್ಷ ರೂಪಾಯಿಗಳ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಿದೆ. ಚಂದ್ರು ಲಮಾಣಿ ಬಿಡುಗಡೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಮತ್ತು ಶಿರಹಟ್ಟಿ ಕ್ಷೇತ್ರದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ಬಳಿ ರಾತ್ರಿಯೇ ಜಮಾಯಿಸಿದ್ದರು. ನೆಚ್ಚಿನ ಶಾಸಕ ಹೊರಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಜೈಲಿನಿಂದ ಬಿಡುಗಡೆಯಾದ ತಕ್ಷಣ ಚಂದ್ರು ಲಮಾಣಿ ಅವರು ಜೈಲಿನ ಸಮೀಪವಿರುವ ಚೆಕ್ ಪೋಸ್ಟ್ ಬಳಿಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಈಡುಗಾಯಿ ಹೊಡೆದು ತಮ್ಮ ಮೇಲಿನ ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು.




