ಉತ್ತರ ಪ್ರದೇಶ: ಬಂದಾದಲ್ಲಿರುವ ಪೋಕ್ಸೊ ವಿಶೇಷ ನ್ಯಾಯಾಲಯವು 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗಳಾದ ರಾಮಭವನ್ ಮತ್ತು ಆತನ ಪತ್ನಿ ದುರ್ಗಾವತಿಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಸಂತ್ರಸ್ತ ಮಕ್ಕಳಲ್ಲಿ ಕೇವಲ ಮೂರು ವರ್ಷ ವಯಸ್ಸಿನ ಕಂದಮ್ಮಗಳೂ ಸೇರಿರುವುದು ಈ ಕೃತ್ಯದ ಭೀಕರತೆಯನ್ನು ಎತ್ತಿ ತೋರಿಸುತ್ತದೆ. ಆರೋಪಿಗಳ ವಿರುದ್ಧ ಸಿಬಿಐ 2020ರ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು.
ತನಿಖೆಯ ವೇಳೆ ಬಯಲಾದ ಸತ್ಯಗಳು ಅತ್ಯಂತ ಅನಾಗರಿಕವಾಗಿದ್ದು, ದೌರ್ಜನ್ಯಕ್ಕೊಳಗಾದ ಮಕ್ಕಳ ಖಾಸಗಿ ಅಂಗಗಳಿಗೆ ತೀವ್ರ ಗಾಯಗಳಾಗಿದ್ದವು. ಹಲವು ಮಕ್ಕಳು ಈ ನೋವಿನಿಂದ ಚೇತರಿಸಿಕೊಳ್ಳಲು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ನ್ಯಾಯಾಲಯವು ಅಪರಾಧಿಗಳ ಕೃತ್ಯವನ್ನು ಕ್ರೂರವೆಂದು ಪರಿಗಣಿಸಿ, ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದೆ.
ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಪ್ರತಿಯೊಬ್ಬ ಮಗುವಿಗೂ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಇದರೊಂದಿಗೆ, ಆರೋಪಿಗಳ ಮನೆಯಿಂದ ವಶಪಡಿಸಿಕೊಂಡ ಹಣವನ್ನು ಎಲ್ಲಾ ಸಂತ್ರಸ್ತ ಮಕ್ಕಳಿಗೆ ಸಮಾನವಾಗಿ ಹಂಚಬೇಕು ಎಂದು ಸೂಚಿಸಿದೆ.


