ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯೂ ನಮ್ಮ ಕೈಯಲ್ಲಿ ಇಲ್ಲ. ಇಂತಹ ವಿಷಯಗಳಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ..
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತು ಗೊಂದಲವಿದ್ದು, ಈ ಬಗ್ಗೆ ಪಕ್ಷದ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ಸೂಕ್ತ. ಇನ್ನು ನಾಯಕತ್ವ ಗೊಂದಲ ಬಗ್ಗೆಯೂ ಗಮನಿಸುತ್ತಿದ್ದಾರೆ. ಈ ಕುರಿತು ಅವರೇ ಸ್ಪಷ್ಟ ಪಡಿಸಿದರೆ ಒಳ್ಳೆಯದು ಎಂದರು.
ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆಂಬ ಚರ್ಚೆ ನಡೆಯುವುದು ಸಹಜ. ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದೆ, ಚರ್ಚೆಗೆ ಯಾವುದೇ ಕಡಿವಾಣವಿಲ್ಲ. ಆದರೆ, ಅಧ್ಯಕ್ಷರ ಆಯ್ಕೆ ವಿಷಯ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.
ಇತ್ತೀಚಿಗೆ ದೆಹಲಿ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕೆಎಸ್‌ಆರ್‌ಟಿಸಿಸಿಯ ಉಪಾಧ್ಯಕ್ಷರಾಗಿ ಸುನೀಲ್ ಹನುಮಣ್ಣವರ ಆಯ್ಕೆಯಾದ ಹಿನ್ನೆಲೆಯಲ್ಲಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದೇವೆ ಎಂದರು.
ಭೂತರಾಮನಹಟ್ಟಿ ಮೃಗಾಲಯದಲ್ಲಿ 28 ಜಿಂಕೆಗಳು ಸಾವನ್ನಪ್ಪಿರುವ ಬಗ್ಗೆ ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದು, ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದರು.
ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, “ವಿಎಂ ಕುರಿತು ಕೊನೆಯವರೆಗೂ ಅನುಮಾನ ಇದ್ದೇ ಇರುತ್ತದೆ. ಈ ಬಗ್ಗೆ ಕೇಂದ್ರ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಬಿಹಾರ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.


