ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿದ್ಯಾನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯನ್ನು ಅಪಹರಿಸುವ ವಿಫಲ ಯತ್ನ ಮಂಗಳವಾರ ನಡೆದಿದೆ. ಎರಡನೇಯ ತರಗತಿಯ ವಿದ್ಯಾರ್ಥಿನಿಯನ್ನು ಶಾಲೆಯ ಕಂಪೌಂಡ್ ಬಳಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಖದೀಮನೋರ್ವ ಅಪಹರಿಸುವ ಪ್ರಯತ್ನ ಮಾಡಿದ್ದಾನೆ.
ಶಾಲೆಯ ಕಂಪೌಂಡ್ ಬಳಿ ಹೊಂಚುಹಾಕಿ ಕುಳಿತಿದ್ದ ಖದೀಮ ವಿದ್ಯಾರ್ಥಿ ಹೊರಗಡೆ ಬರುತ್ತಿದ್ದಂತೆ ಆಕೆಯ ಮೂಗಿಗೆ ಬಟ್ಟೆಯಿಂದ ಮುಚ್ಚಿ ಅಪಹರಿಸಲು ಪ್ರಯತ್ನಿಸಿದ್ದಾನೆ. ಸುಮಾರು 200 ಮೀಟರ್ ತನಕ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿ ಆತನ ಕೈ ಕಚ್ಚಿ ಅಲ್ಲಿಂದ ಪರಾರಿಯಾಗಿ ಶಾಲೆಯ ಆವರಣಕ್ಕೆ ಬಂದಿದ್ದಾಳೆ.
ಕಳೆದ ಗುರುವಾರವು ಸಹ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಇಂದು ಬೆಳ್ಳಂಬೆಳ್ಳಗೆ ವಿದ್ಯಾನಗರ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.