ಡಿಸೆಂಬರ್ 20 ರಿಂದ 22ರವರೆಗೆ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ‘ಕನ್ನಡಕ್ಕಾಗಿ ಓಟ’ ಘೋಷವಾಕ್ಯದೊಂದಿಗೆ ಇಂದು ಬೆಳಗ್ಗೆ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮ್ಯಾರಥಾನ್ನಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಆಯೋಜನೆ ಮಾಡಿದ್ದ ಮ್ಯಾರಥಾನ್ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ, ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ಇದೇ ವೇಳೆ ವಿನಯ್ ಗುರೂಜಿ, ಶಾಸಕ ಗಣಿಗ ರವಿಕುಮಾರ್, ಸ್ಯಾಂಡಲ್ವುಡ್ ನಟರಾದ ಡಾಲಿ ಧನಂಜಯ್, ನೀನಾಸಂ ಸತೀಶ್ ಹಾಗೂ ನಟಿ ಸಪ್ತಮಿಗೌಡ ಭಾಗಿಯಾಗಿದ್ದರು. ಇದರ ಜೊತೆಗೆ ಹಲವು ಗಣ್ಯರು ಕೂಡ ಇದ್ದರು.
ಸರ್.ಎಂ.ವಿ ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭಗೊಂಡು ಸಮ್ಮೇಳನ ನಡೆಯುವ ಸ್ಥಳದವರೆಗೆ ಸುಮಾರು 6 ಕಿಲೋ ಮೀಟರ್ವರೆಗೆ ಜನರು ಓಡಿದರು. ಮ್ಯಾರಥಾನ್ನಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿ ಖುಷಿ ವ್ಯಕ್ತಪಡಿಸಿದರು. ಇದೇ ಡಿಸೆಂಬರ್ 20, 21, 22 ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜಾಗುತ್ತಿದ್ದು, ಇಂದು ಕನ್ನಡಕ್ಕಾಗಿ ಓಟ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.
ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ವೈದ್ಯರ ತಂಡ ಸೇರಿದಂತೆ ಎಲ್ಲಾ ಸಕಲ ಸಿದ್ಧತೆ ಮಾಡಲಾಗಿತ್ತು. ಇದರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಮಸ್ಯೆ ಆಗದೇ ಮ್ಯಾರಥಾನ್ ಸುಗಮವಾಗಿ ನಡೆಯಿತು.