ಸ್ಯಾಂಡಲ್‌ವುಡ್‌ನ ಪೋಷಕ ನಟಿ ಬಿಂದು ಈಗ ಪೊಲೀಸರ ಅತಿಥಿಯಾಗಿದ್ದು, ತನ್ನ ಮಾಜಿ ಪ್ರಿಯಕರ ಮೋಹನ್‌ನನ್ನು ಹತ್ಯೆ ಮಾಡಿದ ಭೀಕರ ಆರೋಪ ಎದುರಿಸುತ್ತಿದ್ದಾರೆ. ‘ಭಜರಂಗಿ’ ಮತ್ತು ‘ಪೊಲೀಸ್ ಕ್ವಾರ್ಟರ್ಸ್’ ಅಂತಹ ಜನಪ್ರಿಯ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಿಂದು, ತನ್ನ ಹೊಸ ಪ್ರಿಯಕರನ ಪ್ರೀತಿಗಾಗಿ ಹಳೇ ಪ್ರೇಮಿಯನ್ನೇ ಮುಗಿಸಿರುವುದು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಪತ್ನಿಯನ್ನು ಬಿಟ್ಟು ಬಂದಿದ್ದ ಮೋಹನ್, ಕಳೆದ ಕೆಲವು ಕಾಲದಿಂದ ನಟಿ ಬಿಂದು ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಎಂದು ತಿಳಿದುಬಂದಿದೆ.
ಕೊಲೆಯಾದ ದಿನದಂದು ಬಿಂದು ತನ್ನ ಹೊಸ ಪ್ರಿಯಕರ ಮತ್ತು ಮಾಜಿ ಪ್ರಿಯಕರ ಮೋಹನ್ ಇಬ್ಬರ ಜೊತೆಗೂ ಸೇರಿ ಪಾರ್ಟಿ ಮಾಡಿದ್ದಳು. ಪಾರ್ಟಿಯ ಭರದಲ್ಲಿ ಮೋಹನ್ ವಯಾಗ್ರಾ ಸೇವಿಸಿ ನಟಿಗೆ ದೈಹಿಕ ಕಿರುಕುಳ ನೀಡಿದ್ದಲ್ಲದೆ, ಆಕೆಯ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಅಶಿಸ್ತಿನ ವರ್ತನೆ ಹಾಗೂ ಹೊಸ ಪ್ರಿಯಕರನ ಮೇಲಿನ ವ್ಯಾಮೋಹವೇ ಸೇರಿ ಮೋಹನ್ ಹತ್ಯೆಗೆ ಸ್ಕೆಚ್ ಹಾಕಲು ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪಾರ್ಟಿ ಮೂಡಲ್ಲಿದ್ದವನಿಗೆ ಪರ್ಮನೆಂಟ್ ಆಗಿ ಟೇಪು ಹಚ್ಚುವ ಮೂಲಕ ಆತನ ಜೀವನಕ್ಕೆ ಎಳ್ಳುನೀರು ಬಿಡಲಾಗಿದೆ.
ಕೊಲೆ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದ ಬಿಂದುವನ್ನ ಕೊನೆಗೂ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಪ್ರಿಯಕರನ ಖುಷಿಗಾಗಿ ಹಳೆಯ ಸಂಬಂಧವನ್ನೇ ರಕ್ತಸಿಕ್ತವಾಗಿ ಅಂತ್ಯಗೊಳಿಸಿರುವ ಈ ನಟಿಯ ಮರ್ಡರ್ ಮಿಸ್ಟರಿ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಸದ್ಯ ಪೊಲೀಸರ ಕಸ್ಟಡಿಯಲ್ಲಿರುವ ಬಿಂದುವಿನಿಂದ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬರಬೇಕಿದೆ.


