ನವದೆಹಲಿ:ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಸಂಪೂರ್ಣ ಪ್ರತಿಪಕ್ಷಗಳು ಮಂಗಳವಾರ ಸದನದಿಂದ ಸಂಕ್ಷಿಪ್ತವಾಗಿ ಹೊರನಡೆದಿವೆ. ಸದನವು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಸಭೆ ಸೇರಿದ ತಕ್ಷಣ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಎದ್ದುನಿಂತು ವಿಷಯ ಪ್ರಸ್ತಾಪಿಸಿ, ವಿಷಯದ ಬಗ್ಗೆ ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿ ಕೋರಿದರು.
ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ, ತನ್ನ ಆಸನದಿಂದ ಮೇಲೆದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವಿಷಯ ಪ್ರಸ್ತಾಪಿಸಿ, ಸಂಭಾಲ್ ವಿಚಾರ ಕುರಿತು ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿ ಕೋರಿದರು. ಇದು ತುಂಬಾ ಗಂಭೀರವಾದ ವಿಷಯ. ಐದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ಕೊಡುವುದಾಗಿ ಹೇಳಿದರು. ಇದರಿಂದ ಕೆರಳಿದ ಯಾದವ್ ಹಾಗೂ ಅವರ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.