ಡಿ.10ರ ವರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲೆಯ ಗಡಿ ಪ್ರವೇಶಿಸುವಂತಿಲ್ಲ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಪ್ರಕಟಿಸಿದ್ದಾರೆ.
ಶಾಹಿ ಜಾಮಾ ಮಸೀದಿ ಸಂಕೀರ್ಣದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗ ಸಂಭಾಲ್‌ಗೆ ಭೇಟಿ ನೀಡುಕ್ಕೂ ಮುನ್ನ ಈ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಈ ಕುರಿತು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಮಾತನಾಡುತ್ತಾ, ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ತಮಗೆ ಕರೆ ಮಾಡಿ ಸಂಭಾಲ್‌ಗೆ ಭೇಟಿ ನೀಡದಂತೆ ವಿನಂತಿಸಿದ್ದಾರೆ. ಡಿಎಂ ಸಂಭಾಲ್ ಕೂಡ ನನಗೆ ಕರೆ ಮಾಡಿ ಹೊರಗಿನವರ ಪ್ರವೇಶ ನಿಷೇಧವನ್ನು ಡಿಸೆಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ಈಗ ಪಕ್ಷದ ಕಚೇರಿಗೆ ಭೇಟಿ ನೀಡಿ ನಮ್ಮ ಮುಂದಿನ ಕ್ರಮವನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ರಾತ್ರಿಯಿಂದಲೇ ಪಾಂಡೆ ನಿವಾಸದ ಹೊರಗೆ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ ಪಕ್ಷದ ನಿಯೋಗ ಶನಿವಾರ ಸಂಭಾಲ್‌ಗೆ ಹೋಗಲಿದೆ ಎಂದು ಎಸ್‌ಪಿ ರಾಜ್ಯಾಧ್ಯಕ್ಷ ಶ್ಯಾಮ್ ಲಾಲ್ ಪಾಲ್ ತಿಳಿಸಿದ್ದರು. ಎಸ್ಪಿ ನಿಯೋಗವು ಭೇಟಿ ನೀಡಿ, ಅಲ್ಲಿನ ಹಿಂಸಾಚಾರದ ಕುರಿತು ವರದಿ ಮಾಡಿ, ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಲಿದೆ ಎಂದು ಹೇಳಿದ್ದರು.
ಒಂದು ದಿನದ ಹಿಂದೆಯಷ್ಟೇ ಉತ್ತರ ಪ್ರದೇಶದ ಸಂಬಾಲ್‌ನಲ್ಲಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ತೆರಳುವಂತೆ ಜಾಮಾ ಮಸೀದಿಯ ಶಾಹಿ ಈದ್ಗಾ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೇ ಈದ್ಗಾ ಸಮಿತಿಯು ಹೈಕೋರ್ಟ್‌ಗೆ ತೆರಳುವವರೆಗೆ ಮಸೀದಿ ಸರ್ವೆ ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಹೇಳಿತ್ತು.