ಆಗ್ರಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಜೊತೆಗೂಡಿ ಸ್ಪರ್ಧೆ ಮಾಡುವ ವಿಚಾರವಾಗಿ ವಿರೋಧ ಪಕ್ಷಗಳೆಲ್ಲಾ ತೀವ್ರ ಕಸರತ್ತು ಮಾಡುತ್ತಿವೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷದ ಮಧ್ಯೆ ಸೀಟು ಹಂಚಿಕೆ ಒಪ್ಪಂದ ಈಗಾಗಲೇ ಏರ್ಪಟ್ಟಿದೆ. ಇದರ ಭಾಗವಾಗಿ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಅಖಿಲೇಶ್ ಸಿಂಗ್ ಯಾದವ್ ಪಾಲ್ಗೊಂಡಿದ್ದಾರೆ.
ನ್ಯಾಯ್ಯಾತ್ರೆ ಉತ್ತರಪ್ರದೇಶದ ಆಗ್ರಾ ತಲುಪಿದ ಸಂದರ್ಭದಲ್ಲಿ ಯಾತ್ರೆಯ ಭಾಗವಾದ ಅಖಿಲೇಶ್ ಸಿಂಗ್ ಯಾದವ್, ರಾಹುಲ್ ಗಾಮಧಿ ಹೋರಾಟಕ್ಕೆ ಬೆಂಬಲ ಘೋಷಿಸಿದರು. ಈ ಕ್ಷಣಕ್ಕೆ ಪ್ರಿಯಾಂಕಾ ಗಾಂಧಿ ಕೂಡ ಸಾಕ್ಷಿಯಾದರು.
ಭಾರತ್ ಜೋಡೋ ನ್ಯಾಯ್ ಯಾತ್ರೆ ಶುರುವಾದ ಬಳಿಕ ವಿರೋಧಪಕ್ಷಗಳ ಪ್ರಮುಖ ನಾಯಕರೊಬ್ಬರು ಇದರ ಭಾಗವಾಗಿರೋದು ಇದು ಮೊದಲ ಬಾರಿ. ಇದಕ್ಕೆ ಮೊದಲು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯ್ಯಾತ್ರೆಯ ಭಾಗವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆಕೆ ಮಾತ್ರ ಯಾತ್ರೆಯಿಂದ ದೂರವೇ ಉಳಿದಿದ್ದರು.