Top Newsಸುದ್ದಿ

ನಟ ಜೀವಂತವಾಗಿರಬೇಕಾದರೆ 5 ಕೋಟಿ ರೂ. ನೀಡಿ: ಸಲ್ಮಾನ್​ ಖಾನ್​ಗೆ ಮತ್ತೆ ಜೀವ ಬೆದರಿಕೆ..!

ಮುಂಬೈ: ಬಾಲಿವುಡ್ ನಟ ಸಲ್ಮಾನ್​ ಖಾನ್​ಗೆ ಮತ್ತೆ ಜೀವ ಬೆದರಿಕೆ ಬಂದಿದ್ದು, ನಟ ಜೀವಂತವಾಗಿರಬೇಕಾದರೆ 5 ಕೋಟಿ ಹಣ ನೀಡಿ, ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆರೋಪಿಯೊಬ್ಬ ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆಂದು ತಿಳಿದುಬಂದಿದೆ.

ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಲ್ಮಾನ್ ಖಾನ್ ಬದುಕಿ ಉಳಿಯಬೇಕಾದರೆ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ದ್ವೇಷವನ್ನು ಕೊನೆಗಾಣಿಸಲು ಬಯಸಿದರೆ 5 ಕೋಟಿ ನೀಡಬೇಕು. ಹಣ ನೀಡದಿದ್ದರೆ ಬಾಬಾ ಸಿದ್ದಿಕಿಗಿಂತ ಅವರ ಸ್ಥಿತಿ ಕೆಟ್ಟದಾಗುತ್ತದೆ ಎಂದು ಗ್ಯಾಂಗ್‌ ಸಂದೇಶ ರವಾನಿಸಿದೆ.

ಮುಂಬೈ ಪೊಲೀಸರು ಸಂದೇಶದ ಮೂಲವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹಿಂದಿನ ಬೆದರಿಕೆಗಳ ನಂತರ ನಟನು ಹೆಚ್ಚಿನ ಎಚ್ಚರಿಕೆ‌ ವಹಿಸಿದ್ದಾರೆ.

ನಿನ್ನೆ, ನವಿ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸುಖ ಅಲಿಯಾಸ್ ಸುಖಬೀರ್ ಬಲ್ಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಹರಿಯಾಣದ ಪಾಣಿಪತ್‌ನಲ್ಲಿ ಬಂಧಿಸಲಾಗಿದೆ. ಬಾಲಿವುಡ್‌ ನಟನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ. ನಟನ ಮೇಲೆ ದಾಳಿ ನಡೆಸಲು ಸಿಂಗ್ ಇತರ ಗ್ಯಾಂಗ್ ಸದಸ್ಯರಿಗೆ ಗುತ್ತಿಗೆ ನೀಡಿದ್ದ ಎಂದು ವರದಿಯಾಗಿದೆ.

ಯೋಜಿತ ದಾಳಿ ನಡೆಸಲು ಸಿಂಗ್ ತನ್ನ ಹ್ಯಾಂಡ್ಲರ್, ಪಾಕಿಸ್ತಾನಿ ಮೂಲದ ವ್ಯಕ್ತಿ ಡೋಗರ್‌ ಎಂಬಾತನೊಂದಿಗೆ ನೇರ ಸಂಪರ್ಕದಲ್ಲಿದ್ದ. ಸಂಚು ರೂಪಿಸಲು ಪಾಕಿಸ್ತಾನದಿಂದ ಕಳ್ಳಸಾಗಣೆಯಾದ AK-47, M16 ಮತ್ತು AK-92 ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಬಂದೂಕುಗಳನ್ನು ಬಳಸಲು ಗ್ಯಾಂಗ್ ಉದ್ದೇಶಿಸಿತ್ತು.

Comments (0)

Your email address will not be published. Required fields are marked *

Back to top button