ಕ್ರಿಕೆಟ್ದೇಶ/ವಿದೇಶಸುದ್ದಿ

ಪಾಕ್-ಬಾಂಗ್ಲಾ ಪಂದ್ಯದಲ್ಲಿ ರನೌಟ್ ಹೈಡ್ರಾಮಾ! ಹೆಲ್ಮೆಟ್‌ ನೆಲಕ್ಕೆಸೆದು ಆಕ್ರೋಶ ಹೊರಹಾಕಿದ ಸಲ್ಮಾನ್ ಅಘಾ

ಢಾಕಾ: ಕ್ರಿಕೆಟ್ ಮೈದಾನದಲ್ಲಿ ‘ಕ್ರೀಡಾ ಸ್ಫೂರ್ತಿ’ ಕುರಿತಾದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಶುಕ್ರವಾರ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯವು ಒಂದು ವಿವಾದಾತ್ಮಕ ರನೌಟ್‌ಗೆ ಸಾಕ್ಷಿಯಾಯಿತು. ಪಾಕ್ ಬ್ಯಾಟರ್ ಸಲ್ಮಾನ್ ಅಘಾ ಔಟ್ ಆದ ರೀತಿ ಮತ್ತು ಅದಕ್ಕೆ ಅವರು ಪ್ರತಿಕ್ರಿಯಿಸಿದ ವಿಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ನಡೆದಿದ್ದೇನು?
ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 39ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು. ಮೊಹಮ್ಮದ್ ರಿಜ್ವಾನ್ ಬಾರಿಸಿದ ಚೆಂಡನ್ನು ತಡೆಯಲು ಬೌಲರ್ ಮೆಹಿದಿ ಹಸನ್ ಮಿರಾಜ್ ಯತ್ನಿಸಿದರು. ಈ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಸಲ್ಮಾನ್ ಅಘಾ ಕ್ರೀಸ್‌ನಿಂದ ತುಸು ಮುಂದೆ ಬಂದಿದ್ದರು. ಚೆಂಡು ಬೌಲರ್ ಕೈ ತಪ್ಪಿ ಮೈದಾನದಲ್ಲಿ ನಿಂತಾಗ, ಸೌಜನ್ಯದ ದೃಷ್ಟಿಯಿಂದ ಸಲ್ಮಾನ್ ಅದನ್ನು ಎತ್ತಿ ಬೌಲರ್‌ಗೆ ನೀಡಲು ಮುಂದಾದರು.

ಆದರೆ, ಇದೇ ಅವಕಾಶವನ್ನು ಬಳಸಿಕೊಂಡ ಮೆಹಿದಿ ಹಸನ್, ಕೂಡಲೇ ಚೆಂಡನ್ನು ಕಿತ್ತುಕೊಂಡು ಸ್ಟಂಪ್‌ಗೆ ಹೊಡೆದರು ಹಾಗೂ ರನೌಟ್‌ಗಾಗಿ ಮನವಿ ಮಾಡಿದರು. ತೃತೀಯ ಅಂಪೈರ್ ಪರಿಶೀಲಿಸಿದಾಗ ಸಲ್ಮಾನ್ ಕ್ರೀಸ್‌ನಿಂದ ಹೊರಗಿರುವುದು ದೃಢಪಟ್ಟಿದ್ದರಿಂದ ಅವರನ್ನು ‘ಔಟ್’ ಎಂದು ಘೋಷಿಸಲಾಯಿತು.


ಅಂಪೈರ್ ತೀರ್ಪಿನಿಂದ ಆಘಾತಕ್ಕೊಳಗಾದ ಸಲ್ಮಾನ್ ಅಘಾ ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಪೆವಿಲಿಯನ್‌ಗೆ ಮರಳುವಾಗ ತೀವ್ರ ಆಕ್ರೋಶದಿಂದ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ನೆಲಕ್ಕೆ ಎಸೆದು ಕಿಡಿಕಾರಿದರು. ಬೌಲರ್ ಕ್ರೀಡಾ ಸ್ಫೂರ್ತಿ ಮರೆತು ನಡೆದುಕೊಂಡಿದ್ದಾರೆ ಎಂಬುದು ಪಾಕ್ ಆಟಗಾರನ ಆಕ್ರೋಶಕ್ಕೆ ಕಾರಣವಾಗಿತ್ತು.


ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಎರಡು ಬಣಗಳಾಗಿ ವಿಭಜನೆಗೊಂಡಿದ್ದಾರೆ:”ನಿಯಮದ ಪ್ರಕಾರ ಇದು ಔಟ್. ಬ್ಯಾಟರ್ ಕ್ರೀಸ್ ಬಿಟ್ಟು ಹೊರಬರಬಾರದಿತ್ತು” ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

“ಸಹಾಯ ಮಾಡಲು ಹೋದ ಆಟಗಾರನನ್ನು ಈ ರೀತಿ ಔಟ್ ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧ” ಎಂದು ಟೀಕಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button