ಬೆಂಗಳೂರು: ಕರ್ನಾಟಕದ ಪರಪ್ಪನ ಅಗ್ರಹಾರ ಜೈಲು ಬರೀ ಶಿಕ್ಷೆ ಕೊಡುವ ಜಾಗ ಅಲ್ಲ ಅಪರಾಧಿಗಳ ಪಾಲಿನ ಸ್ವರ್ಗ ಎಂಬುವುದು ಮತ್ತೊಮ್ಮೆ ನಿಜ ಆಗ್ತಿದೆ.. ಕ್ರಿಮಿನಲ್ ಉಮೇಶ್ ರೆಡ್ಡಿ ಮತ್ತು ಇತರೆ ಖೈದಿಗಳು ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ಚರ್ಚೆಗೆ ಗ್ರಾಸವಾಗಿದೆ.. ಇದೇ ವಿಚಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ಗೃಹ ಇಲಾಖೆ ಸತ್ತು ಹೋಗಿದೆ. ಭಯೋತ್ಪಾದಕರಿಗೆ ಕರ್ನಾಟಕ ಸ್ವರ್ಗ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುತ್ತಾರೆ. ಇವರ ಮೇಲಿದ್ದ ಎಲ್ಲಾ ಕೇಸ್ಗಳನ್ನೂ ವಾಪಸ್ ಪಡೆದರು. ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿ ಉಗ್ರ ಕೃತ್ಯದಲ್ಲಿ ಅರೆಸ್ಟ್ ಆದವರಿಗೆ ಮೊಬೈಲ್ ಕೊಡುತ್ತಾರೆ. ರಾಜ್ಯ ಸರ್ಕಾರದ ಗೃಹ ಇಲಾಖೆ ಸತ್ತೇ ಹೋಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಪಣತ್ತೂರಿನಲ್ಲಿ ರಸ್ತೆಗಳ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ರಸ್ತೆಯಲ್ಲಿ ಕಸ ಇರುವ ಕಾರಣ ರಸ್ತೆಗಳು ಬ್ಲಾಕ್ ಆಗಿವೆ. ರಸ್ತೆಗಳು ಬ್ಲಾಕ್ ಆಗಿರುವುದರಿಂದ ಫುಟ್ಪಾತ್ನಲ್ಲಿ ಬೈಕ್ ಸಂಚರಿಸುತ್ತಿದ್ದಾರೆ. ಪಣತ್ತೂರಿನಲ್ಲಿ ಟನಲ್ನಲ್ಲಿ ಜನ ಸಂಚಾರ ಮಾಡುತ್ತಿದ್ದಾರೆ. ತೆರಿಗೆ ಹಣವನ್ನೆಲ್ಲಾ ತೆಗೆದುಕೊಂಡು ಗ್ಯಾರಂಟಿಗಳಿಗೆ ಹಾಕಿದ್ದಾರೆ. ಒಂದೊಂದು ರಸ್ತೆಗೆ 25 ಕೋಟಿಯಿಂದ 30 ಕೋಟಿ ರೂ ಬಿಲ್ ಬಾಕಿ ಇದೆ ಎಂದರು.
ಇನ್ನು ಮತಗಳ್ಳತನದ ವಿರುದ್ಧ ಕಾಂಗ್ರೆಸ್ನಿಂದ ಸಹಿ ಸಂಗ್ರಹ ಅಭಿಯಾನ ವಿಚಾರವಾಗಿ ಮಾತನಾಡಿದ್ದು, ಕಾಂಗ್ರೆಸ್ನವರಿಗೆ ಯಾವುದು ಆದ್ಯತೆ ಅಂತ ಗೊತ್ತಾಯ್ತು ಅಲ್ವಾ. ಕಾಂಗ್ರೆಸ್ನವರಿಗೆ ರಸ್ತೆಗಳು, ಕಸದ ಸಮಸ್ಯೆ ಆದ್ಯತೆ ಆಗಲಿಲ್ಲ. ಆದರೆ ಇವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮೆಚ್ಚಿಸಬೇಕು. ಯೋಗ್ಯತೆ ಇದ್ದರೆ ದೂರು ಕೊಡಲಿ, ನ್ಯಾಯಾಲಯಕ್ಕೆ ಹೋಗಲಿ. ಮಾನ ಮರ್ಯಾದೆ ಇದ್ದರೆ ಬಂದು ರಸ್ತೆ ಗುಂಡಿ ಮುಚ್ಚಬೇಕಿತ್ತು. ಆದರೆ ಗುಂಡಿಗಳಲ್ಲಿ ಜನರನ್ನು ಹಾಕಿ ಮುಚ್ಚುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.


