Top Newsಜಿಲ್ಲೆಸುದ್ದಿ

ಶೇಷಾದ್ರಿಪುರಂ ಕೆನರಾ ಬ್ಯಾಂಕ್‌ಗೆ ಕನ್ನ;ಸೈರನ್ ಸದ್ದಿಗೆ ಹೆದರಿ ಓಡಿದ ಕಳ್ಳರು!

ಬೆಂಗಳೂರು: ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ಸುಮಾರು 3 ಗಂಟೆಯ ವೇಳೆಗೆ ಬ್ಯಾಂಕಿನ ಹಿಂಭಾಗದ ಕಿಟಕಿಯ ಗ್ರಿಲ್ ಕಟ್ ಮಾಡಿ ಒಳನುಗ್ಗಿದ ಖದೀಮರು, ಬ್ಯಾಂಕಿನ ಒಳಗಡೆ ಹುಡುಕಾಟ ನಡೆಸಿದ್ದಾರೆ. ಆದರೆ, ಕಳ್ಳರು ಸ್ಟ್ರಾಂಗ್ ರೂಮ್ ಬಳಿಯಿದ್ದ ವೈರ್ ಕಟ್ ಮಾಡಲು ಯತ್ನಿಸುತ್ತಿದ್ದಂತೆಯೇ ಬ್ಯಾಂಕಿನ ಸೆಕ್ಯೂರಿಟಿ ಸೈರನ್ ಜೋರಾಗಿ ಮೊಳಗಿದ್ದರಿಂದ ಗಾಬರಿಗೊಂಡು ಅಲ್ಲಿಂದ ಪಲಾಯನ ಮಾಡಿದ್ದಾರೆ.

ಸೈರನ್ ಸದ್ದು ಕೇಳಿ ಸ್ಥಳೀಯರು ಮತ್ತು ಬ್ಯಾಂಕ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಶೇಷಾದ್ರಿಪುರಂ ಪೊಲೀಸರು ಮತ್ತು ಬೆರಳಚ್ಚು ತಜ್ಞರನ್ನೊಳಗೊಂಡ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಟ್ರಾಂಗ್ ರೂಮ್ ಸುರಕ್ಷಿತವಾಗಿದ್ದರೂ, ಕಳ್ಳರು ಒಳಗೆ ನುಗ್ಗಿ ವೈರ್ ಕಟ್ ಮಾಡಿರುವುದು ಗಂಭೀರ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಅವರು ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ತನಿಖೆಯ ಹಿನ್ನೆಲೆಯಲ್ಲಿ ಇಂದು ಕೆನರಾ ಬ್ಯಾಂಕ್‌ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬ್ಯಾಂಕಿಗೆ ವ್ಯವಹಾರಕ್ಕಾಗಿ ಬಂದಿದ್ದ ಗ್ರಾಹಕರು ಬೀಗ ಹಾಕಿರುವುದನ್ನು ಕಂಡು ಮತ್ತು ಕಳ್ಳತನದ ಯತ್ನದ ಸುದ್ದಿ ಕೇಳಿ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಬ್ಯಾಂಕಿನ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪರಾರಿಯಾದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button