ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಸದ್ಯ ಕಾಂತಾರ ಚಿತ್ರದ ಪ್ರಿಕ್ವೇಲ್‌ನಲ್ಲಿ ಬಿಜಿಯಾಗಿದ್ದಾರೆ. 2022ರಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾದ ಪ್ರಿಕ್ವೇಲ್ ಕಾಂತಾರ ಅಧ್ಯಾಯ-2 ಆಗಿ ಬಿಡುಗಡೆಯಾಗಲಿದೆ. ನಿರ್ಮಾಪಕರು ಈಗಾಗಲೇ ಈ ಚಿತ್ರದ ಮೊದಲ ಗ್ಲಿಂಪ್ಸ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ರಿಷಭ್ ಶೆಟ್ಟಿ ಅವರು ಕೈಯಲ್ಲಿ ತ್ರಿಶೂಲ ಹಿಡಿದು ಉಗ್ರ ಶಿವನಂತೆ ಕಾಣುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾ ಸುಮಾರು 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಾಡಿದ್ದ ಒಂದೇ ಒಂದು ಟ್ವಿಟ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. ಎಂಟು ವರ್ಷಗಳ ಹಿಂದೆ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾವನ್ನು ಉಲ್ಲೇಖಿಸಿ ರಿಷಭ್ ಪೋಸ್ಟ್ ಹಾಕಿದ್ದಾರೆ. ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 8 ವರ್ಷಗಳು ಕಳೆದಿವೆ. ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ. ನಿಮ್ಮ ಬೆಂಬಲಕ್ಕೆ ಹೃತೂರ್ವಕ ಧನ್ಯವಾದಗಳು ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ದೇಶಿಸಿದರು. ಇದೇ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.
ಕಿರಿಕ್ ಪಾರ್ಟಿ ಸಿನಿಮಾ 8 ವರ್ಷ ಪೂರೈಸಿದ್ದಕ್ಕೆ ಧನ್ಯವಾದ ತಿಳಿಸಿದಿರುವ ರಿಷಭ್, ಸಿನಿಮಾದ ಒಂದು ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ಮುಖ್ಯ ಕಲಾವಿದರಿದ್ದಾರೆ. ಆದರೆ, ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ ಇಲ್ಲ. ಅಲ್ಲದೆ, ರಶ್ಮಿಕಾ ಹೆಸರನ್ನೂ ಉಲ್ಲೇಖಿಸಿಲ್ಲ. ಇದನ್ನು ನೋಡಿದ ರಶ್ಮಿಕಾ ಅಭಿಮಾನಿಗಳು ರಿಷಭ್ ವಿರುದ್ಧ ಕಿಡಿಕಾರಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ರಶ್ಮಿಕಾ ಇರದೇ ಹೋಗಿದ್ದರೆ ಇದೊಂದು ಕೆಟ್ಟ ಚಿತ್ರವಾಗುತ್ತಿತ್ತು ಎಂದು ಕೆಲ ಅಭಿಮಾನಿಗಳು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆಕೆಯ ಹೆಸರು ಮತ್ತು ಫೋಟೋ ಹಾಕಿಲ್ಲ ಎಂದು ಕೆಲ ಅಭಿಮಾನಿಗಳು ಕೋಪಗೊಂಡಿದ್ದಾರೆ. ರಿಷಭ್ ಅವರು ತಮ್ಮ ಪೋಸ್ಟ್‌ನಲ್ಲಿ ರಕ್ಷಿತ್ ಶೆಟ್ಟಿ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಕ್ಕೆ ರಶ್ಮಿಕಾ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ, ರಿಷಬ್ ಶೆಟ್ಟಿ ನಡೆಯನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬೆಳೆಯುತ್ತಿದ್ದಂತೆ ಕಿರಿಕ್ ಪಾರ್ಟಿ ಸಿನಿಮಾ ವಿಚಾರವಾಗಿ ರಶ್ಮಿಕಾ ಅಸಡ್ಡೆ ಮಾತಗಳನ್ನಾಡಿದ್ದನ್ನು ನೆನಪಿಸಿ, ರಿಷಭ್ ನಡೆದುಕೊಂಡ ರೀತಿ ಸರಿಯಿದೆ ಎಂದು ಅಭಿಮಾನಿಗಳು ಡಿವೈನ್ ಸ್ಟಾರ್ ಬೆನ್ನಿಗೆ ನಿಂತಿದ್ದಾರೆ. ಅಂದಹಾಗೆ 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಆಯಿತು.