ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ ಆರ್ ಮಮತ(47) ಅವರು ಇಂದು ನೆಲಮಂಗಲ ಬಳಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್, ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅವರು ಅಗಲಿದ್ದಾರೆ. ಮಮತ ಅವರ ಅಂತ್ಯಕ್ರಿಯೆ ತುಮಕೂರು ತಾಲ್ಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ. ಬೆಂಗಳೂರಿನ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆ 9 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆಯುಡಬ್ಲ್ಯುಜೆ ಸಂತಾಪ:
ಹಿರಿಯ ವಾರ್ತಾಧಿಕಾರಿ ಮಮತಾ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕ್ರೀಯಾಶೀಲ ಅಧಿಕಾರಿಯಾಗಿದ್ದ ಮಮತಾ ಸಾವು ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.