ವಿಜಯಪುರ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 10ನೇ ಆರೋಪಿ ವಿನಯ್’ನನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಸಿಎಆರ್ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಸ್ಥಳಾಂತರ ಮಾಡಲಾಗಿದೆ. ಜೈಲಿಗೆ ಬಂದ ಬಳಿಕ ವಿನಯ್ ಆರೋಗ್ಯ ತಪಾಸಣೆ ಹಾಗೂ ಇತರ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕೇಂದ್ರ ಕಾರಾಗೃಹದ ಒಳಗೆ ಕಾರಾಗೃಹ ಸಿಬ್ಬಂದಿ ಕರೆದೊಯ್ದರು.
ಕಾರಾಗೃಹದ ಸೆಲ್ ನಂಬರ್ 1 ರಲ್ಲಿ ಆರೋಪಿ ವಿನಯ್ ನನ್ನು ಇರಿಸಲಾಗಿದೆ. 14433 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಸೆಲ್‌ನಲ್ಲಿ ಶೌಚಾಲಯ ಸೌಲಭ್ಯ ಇದ್ದು, ಸಿಸಿಟಿವಿ ಕಣ್ಗಾವಲು ಇದೆ. ಜೊತೆಗೆ ಇಬ್ಬರು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ವಾರದಲ್ಲಿ ಒಂದು ಬಾರಿ ಮಾತ್ರ ಕುಟುಂಬಸ್ಥರಿಗೆ ಹಾಗೂ ಅವರ ಪರ ವಕೀಲರಿಗೆ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಜೈಲು ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಅವರು ಹೇಳಿದ್ದಾರೆ.