
ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅಪ್ರತಿಮ ಗಾಯಕಿ ಎಂಬುದು ಅಕ್ಷರಶಃ ಸತ್ಯ. 1933 ಸೆಪ್ಟೆಂಬರ್ 8 ರಂದು ಜನಿಸಿದ ಅವರು, ಕಳೆದ ಎಂಟು ದಶಕಗಳಿಂದ ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಿಂದಿ, ಕನ್ನಡ, ಮರಾಠಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಲತಾ ಮಂಗೇಶ್ಕರ್ ಅವರ ತಂಗಿಯಾಗಿ ಸಂಗೀತ ಕುಟುಂಬದಿಂದ ಬಂದ ಇವರು, ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್ ಮತ್ತು ಕ್ಯಾಬರೆ ಹಾಡುಗಳವರೆಗೆ ಎಲ್ಲವನ್ನೂ ಲೀಲಾಜಾಲವಾಗಿ ಹಾಡಬಲ್ಲ ಅದ್ಭುತ ಪ್ರತಿಭೆ.




