ಬೆಂಗಳೂರು: ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇವತ್ತು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ರಾಜ್ಯದಿಂದ ಕೇಂದ್ರಕ್ಕೆ ನೀಡುತ್ತಿರುವ ಹಾಗೂ ರಾಜ್ಯಕ್ಕೆ ಸಿಗುತ್ತಿರುವ ಸಂಪನ್ಮೂಲದ ವಿವರಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಕಡಿತವಾಗಿರುವ ಅನುದಾನದ ಬಗ್ಗೆಯೂ ಮಾಹಿತಿಯನ್ನು ನೀಡಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಫೆಬ್ರವರಿ 7ರಂದು ದೆಹಲಿಯ ಜಂತರ್ ಮಂಥರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಮೂಲಕ ದೇಶದ ಜನರ ಗಮನವನ್ನು ಸೆಳೆಯುತ್ತೇವೆ. ಇದೂವರೆಗೂ ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಿಲ್ಲ. ಈಗ ಅನಿವಾರ್ಯ ಕಾರಣಗಳಿಂದಾಗಿ ಪ್ರತಿಭಟನೆ ಮಾಡಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷ, ಬಿಜೆಪಿ ವಿರುದ್ಧ ಮಾಡುವ ಪ್ರತಿಭಟನೆ ಅಲ್ಲ. ರಾಜಕೀಯ ಪ್ರತಿಭಟನೆ ಅಲ್ಲವೇ ಅಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ. ಹಣಕಾಸು ಹಂಚಿಕೆಯಲ್ಲಿ ಆಗಿರುವ ತಾರತಮ್ಯ, ಬರಗಾಲದಲ್ಲಿ ತೋರಿಸಿರುವ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.
ಕೇಂದ್ರ ಸರ್ಕಾರ ಇದೂವರೆಗೂ ಬರಗಾಲದ ಹಣವನ್ನು ನೀಡಿಲ್ಲ. ಕೊನೆ ಪಕ್ಷ ಬರಗಾಲ ಕಾರಣ ಕೂಲಿಗೂ ಹಣ ನೀಡಿಲ್ಲ. ಎಷ್ಟು ಅಂತಾ ನಾವು ನಮ್ಮ ನೋವನ್ನು ಸಹಿಸಿಕೊಳ್ಳಲು ಸಾಧ್ಯ? ರಾಜ್ಯದ ನ್ಯಾಯಕ್ಕಾಗಿ ಹೋರಾಡಬೇಕಿದೆ. ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದರು.
ಎಲ್ಲಾ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗವಹಿಸುತ್ತಾರೆ. ನಾಳೆ ಸಂಜೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ನಾಡಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣ ಅಂದ್ರೆ ಅದು ರಾಜ್ಯಗಳಿಂದ ವಸೂಲಾಗುವ ತೆರಿಗೆ ಹಣ. ಈ ತೆರಿಗೆ ಜಿಎಸ್‌ಟಿ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಸೆಸ್ ಗಳಿಂದ ಸಂಗ್ರಹಿಸುವ ಹಣವಾಗಿದೆ. ಹಣಕಾಸು ಆಯೋಗ ರಾಜ್ಯಗಳಿಗೆ ಹೇಗೆ ಹಣ ಹಂಚಿಕೆ ಆಗಬೇಕು ಎಂಬುದನ್ನು ಹೇಳುತ್ತದೆ.